ಭಾಲ್ಕಿ: ಪ್ರವಚನ ಆಲಿಸುವುದರಿಂದ ಹತ್ತು ಜನರಲ್ಲಿ ಒಬ್ಬರಾದರೂ ಪರಿವರ್ತನೆ ಹೊಂದಬಹುದು ಎನ್ನುವ ಆಸೆಯಿಂದ ಬಸವ ಭಕ್ತರು ಪ್ರವಚನ ಆಲಿಸಲು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಹಿರೇಮಠ ಸಂಸ್ಥಾನದ
ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ನಡೆದ ಶ್ರಾವಣಮಾಸ ಪ್ರವಚನ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪಟ್ಟಣದ ವಿವಿಧ ಓಣಿಗಳ ಭಕ್ತಾದಿಗಳು ತಾವು ಪ್ರವಚನಕ್ಕೆ ಬರುವುದರೊಂದಿಗೆ ಗುರು ಕಾರ್ಯವೆಂದು ತಿಳಿದು ತಮ್ಮ ನೆರೆ ಹೊರೆಯವರನ್ನು ಕರೆದುಕೊಂಡು ಬರಬೇಕು ಎಂದರು.
ನಮ್ಮ ಮಾತಿಗೆ ಗೌರವ ಸಿಗಬೇಕಾದರೆ, ನಾವು ಆಡಿದ ಮಾತನ್ನು ಆಚರಣೆಗೆ ತರಬೇಕು. ನುಡಿದಂತೆ ನಡೆದರೆ ಮಾತ್ರ ನಮ್ಮ ಜೀವನ ಸಾರ್ಥಕ. ಬಸವ ಭಕ್ತರು ನುಡಿದಂತೆ ನಡೆಯುವ ಆದರ್ಶ ವ್ಯಕ್ತಿಗಳು. ಅಂತಹವರಲ್ಲಿ ಬಸವತತ್ವವನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡ ಲಿಂಗೈಕ್ಯ ಡಾ| ಚನ್ನಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ನಡೆದ ಡಾ| ಬಸವಲಿಂಗ ಪಟ್ಟದ್ದೇವರು ಭಾಲ್ಕಿಯಲ್ಲಿ ಸುಮಾರು 30 ವರ್ಷಗಳಿಂದ ಪ್ರತಿ ವರ್ಷ ತಪ್ಪದೇ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಪ್ರತಿನಿತ್ಯ ಶರಣರ ತತ್ವಾದರ್ಶಗಳ ಬಗ್ಗೆ ಪ್ರವಚನ ಮಾಡಿಕೊಂಡು ಬರುತ್ತಿದ್ದಾರೆ.
ಈ ವರ್ಷವೂ ಪ್ರವಚನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಪ್ರವಚನ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಕಾಂತ ಬಿರಾದಾರ ಮಾತನಾಡಿ, ಗುರುಕಾರ್ಯ ಮಾಡುವುದು ಭಕ್ತರ ಕರ್ತವ್ಯವಾಗಿದೆ. ಹೀಗಾಗಿ ಪಟ್ಟಣದ ಪ್ರತಿ ಓಣಿಯ ಗುರು ಭಕ್ತರು, ಹಿರೇಮಠದ ವತಿಯಿಂದ ಪ್ರಕಟಿಸಲಾದ ಕರ ಪತ್ರವನ್ನು ತಮ್ಮ ತಮ್ಮ ನೆರೆಯವರಿಗೆ ಕೊಟ್ಟು, ಪ್ರವಚನಕ್ಕೆ ಆಗಮಿಸಲು ಪ್ರೇರೇಪಿಸಬೇಕು ಎಂದು
ಹೇಳಿದರು.
ಇದೇವೇಳೆ ವಿವಿಧ ಓಣಿಯ ಪ್ರಮುಖ ಭಕ್ತರನ್ನು ಗುರುತಿಸಿ, ಅವರ ಓಣಿಯ ನಾಗರಿಕರಿಗೆ ಕರ ಪತ್ರ ಹಂಚಿ, ಪ್ರವಚನ ಆಲಿಸಲು ಪ್ರೇರೇಪಿಸುವ ಬಗ್ಗೆ ಮಾಹಿತಿ ನೀಡಲಾಯಿತು. ನ್ಯಾಯವಾದಿ ವಿಜಯಕುಮಾರ ಪಾಟೀಲ, ಗಣಪತಿ ಬೋಚರೆ, ಮಲ್ಲಮ್ಮಾ ನಾಗನಕೇರೆ, ರಮೇಶ ಕರಕಾಳೆ, ವಿಜಯಕುಮಾರ ಗೌಡಗಾವೆ, ಸಂತೋಷ ಹಡಪದ, ರಾಜೇಶ ಮುಗಟೆ, ಶರಣಪ್ಪ ಬಿರಾದಾರ, ಬಸವಪ್ರಭು ಸೊಲ್ಲಾಪೂರೆ ಇದ್ದರು. ಬಸವರಾಜ ಮರೆ ಸ್ವಾಗತಿಸಿದರು. ಪ್ರೊ|ಚಂದ್ರಕಾಂತ ಬಿ. ನಿರೂಪಿಸಿದರು. ನಿವೃತ್ತ ಅಭಿಯಂತರ ವಿಶ್ವನಾಥಪ್ಪ ಬಿರಾದಾರ ವಂದಿಸಿದರು.