ವಾಷಿಂಗ್ಟನ್: 2022ರ ಏಪ್ರಿಲ್ ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಿಂದ ವಿಮಾನದಲ್ಲಿ ತೆರಳುತ್ತಿದ್ದ ಮಾಜಿ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಪ್ರಯಾಣಿಕರೊಬ್ಬರ ಮುಖಕ್ಕೆ ಹಲವಾರು ಬಾರಿ ಗುದ್ದಿದ ಘಟನೆಗೆ ಸಂಬಂಧಿಸಿದಂತೆ ಇದೀಗ ಸಂತ್ರಸ್ತ ಪ್ರಯಾಣಿಕನಿಗೆ ಟೈಸನ್ ಬರೋಬ್ಬರಿ 3 ಕೋಟಿ ರೂಪಾಯಿ ಪರಿಹಾರ ನೀಡಬೇಕಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:NZvsBAN; ನ್ಯೂಜಿಲ್ಯಾಂಡ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಬಾಂಗ್ಲಾದೇಶ
ವಿಮಾನದಲ್ಲಿ ತನ್ನ ಹಿಂಭಾಗ ಕುಳಿತಿದ್ದ ಪ್ರಯಾಣಿಕ ಮೆಲ್ವಿನ್ ಟೌನ್ ಸೆಂಡ್ ಎಂಬವರ ಮುಖಕ್ಕೆ ಪಂಚ್ ಮಾಡಿದ್ದು, ಇದನ್ನು ಟೈಸನ್ ಚಿತ್ರೀಕರಣ ಮಾಡಿಕೊಂಡಿದ್ದರು. ಘಟನೆಯಲ್ಲಿ ಮೆಲ್ವಿನ್ ಗೆ ಬಲವಾದ ಹೊಡೆತ ಬಿದ್ದ ಪರಿಣಾಮ ರಕ್ತಸ್ರಾವವಾಗಿತ್ತು.
ಈ ಪ್ರಕರಣದಲ್ಲಿ ಮೆಲ್ವಿನ್ ಟೈಸನ್ ವಿರುದ್ಧ ಕಾನೂನು ಸಮರಕ್ಕೆ ಇಳಿದಿದ್ದರು. ಟಿಎಂಝಡ್ ವರದಿ ಪ್ರಕಾರ, ಮೆಲ್ವಿನ್ ಟೌನ್ ಸೆಂಡ್ ವಕೀಲರು ಟೈಸನ್ ಗೆ ಕಳುಹಿಸಿರುವ ಲೀಗಲ್ ನೋಟಿಸ್ ನಲ್ಲಿ, ವಿಮಾನದಲ್ಲಿ ತಮ್ಮ ಕಕ್ಷಿದಾರರಿಗೆ ಬಲವಾದ ಹೊಡೆತ ಬಿದ್ದಿದ್ದರಿಂದ ತಲೆ ಮತ್ತು ಕುತ್ತಿಗೆ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತಿದೆ. ವ್ಯಕ್ತಿಯು ವಾಕರಿಕೆ, ತಲೆನೋವು, ಖಿನ್ನತೆ, ನಿದ್ರೆ, ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದು, ದೃಷ್ಟಿಹೀನತೆಯಿಂದ ಬಳಲುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಮೆಲ್ವಿನ್ ಅವರ ಬಳಿ ಮೆಡಿಕಲ್ ಇನ್ಸೂರೆನ್ಸ್ ಇಲ್ಲವಾಗಿತ್ತು. ಇದರಿಂದಾಗಿ ತನಗೆ ಕೋಟ್ಯಂತರ ರೂಪಾಯಿ ವೈದ್ಯಕೀಯ ವೆಚ್ಚವಾಗಿದೆ. ತಾನು ಈಗಲೂ ಚಿಕಿತ್ಸೆ ಪಡೆಯುತ್ತಿದ್ದೇನೆ. ಹೀಗಾಗಿ ತನಗೆ ಮೂರು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಮೆಲ್ವಿನ್ ತಿಳಿಸಿದ್ದಾರೆ.
ಆದರೆ ಮೈಕ್ ಟೈಸನ್ ವಕೀಲರು ಇದನ್ನು ತಳ್ಳಿಹಾಕಿದ್ದಾರೆ. ನಾನು ಮೆಲ್ವಿನ್ ಪರ ವಕೀಲರ ನೋಟಿಸ್ ಸ್ವೀಕರಿಸಿದ್ದೇನೆ. ನಾವು ಯಾವುದೇ ರೀತಿಯ ಪರಿಹಾರ ಕೊಡುವ ಪ್ರಶ್ನೆಯೇ ಇಲ್ಲ. ಘಟನೆಯಲ್ಲಿ ಟೈಸನ್ ವಿರುದ್ಧ ಯಾವ ಕ್ರಿಮಿನಲ್ ಮೊಕದ್ದಮೆಯೂ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.