ಹೊಸದಿಲ್ಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಅಧಿಕಾರಿಯಂತೆ ಸೋಗು ಹಾಕಿದ ರಾಷ್ಟ್ರ ರಾಜಧಾನಿಯ ಹೋಟೆಲ್ ವೊಂದಕ್ಕೆ ವಂಚಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಆರೋಪಿಯು ದೆಹಲಿಯ ಸ್ಟಾರ್ ಹೋಟೆಲ್ ಗೆ 23 ಲಕ್ಷಕ್ಕೂ ಹೆಚ್ಚು ಮೊತ್ತದ ಬಾಕಿ ಬಿಲ್ ಪಾವತಿಸದೆ ಪರಾರಿಯಾಗಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಕರ್ನಾಟಕದ ದಕ್ಷಿಣ ಕನ್ನಡ ಮೂಲದ ಮಹಮದ್ ಷರೀಫ್ (41) ಎಂದು ಗುರುತಿಸಲಾಗಿದೆ. ಈತ ನಕಲಿ ವ್ಯಾಪಾರ ಕಾರ್ಡ್ ತೋರಿಸಿ ಕಳೆದ ವರ್ಷ ಸುಮಾರು ಮೂರು ತಿಂಗಳ ಕಾಲ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ತಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 19ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಆತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಮೂರು ದಿನ ಅಲ್ಲಿ, ಮೂರು ದಿನ ಇಲ್ಲಿ!: ಇಬ್ಬರು ಹೆಂಡಿರ ಮುದ್ದಿನ ಗಂಡನ ವಿಚಿತ್ರ ಒಪ್ಪಂದವಿದು!
ಅಲ್ಲದೆ ಹೊಟೇಲ್ ನ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದು, ಬಾಕಿ ಬಿಲ್ ಗಳನ್ನು ಪಾವತಿಸದೆ ಹೋಟೆಲ್ ಗೆ 23,46,413 ರೂ. ಮೌಲ್ಯದ ನಷ್ಟ ಉಂಟಾಗಿದೆ.
ಘಟನೆಯ ನಂತರ, ಹೋಟೆಲ್ ನ ಜನರಲ್ ಮ್ಯಾನೇಜರ್ ಅನುಪಮ್ ದಾಸ್ ಗುಪ್ತಾ ಅವರ ದೂರಿನ ಮೇರೆಗೆ ಪೊಲೀಸರು ಈ ವರ್ಷದ ಜನವರಿ 14 ರಂದು ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.