ಬೆಂಗಳೂರು: ದೈಹಿಕ ಸಂಪರ್ಕಕ್ಕೆ ಒಪ್ಪದ ಪರಿಚಯಸ್ಥ ಮಹಿಳೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಕಿರುಕುಳ ನೀಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಈಶಾನ್ಯವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಸಮರ್ ಪರಮಾನಿಕ್(47) ಬಂಧಿತ.
ಆರೋಪಿ ಕೆಲ ವರ್ಷಗಳ ಹಿಂದೆಯೆ ಬೆಂಗಳೂರಿಗೆ ಬಂದಿದ್ದು, ಹಲಸೂರು ಗೇಟ್ ಠಾಣೆ ಹಿಂಭಾಗದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅವಿನ್ಯೂ ರಸ್ತೆಯಲ್ಲಿರುವ ಚಿನ್ನಾಭರಣ ತಯಾರಿಕಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಕೆಲ ವರ್ಷ ಗಳ ಹಿಂದೆ ಬ್ಯೂಟಿಷಿಯನ್ ಕೋರ್ಸ್‌ಗಾಗಿ ಬೆಂಗಳೂರಿಗೆ ಬಂದಿದ್ದ 23 ವರ್ಷದ ಮಹಿಳೆ ಯಲಹಂಕದಲ್ಲಿರುವ ಬ್ಯೂಟಿಪಾರ್ಲರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಆರೋಪಿ ಬ್ಯೂಟಿಪಾರ್ಲರ್ ಗೆ ಹೋದಾಗ ಮಹಿಳೆಯ ಪರಿಚಯವಾಗಿದೆ. ಒಂದೇ ರಾಜ್ಯದವರಾದ್ದರಿಂದ ಇಬ್ಬರ ನಡುವೆ ಸ್ನೇಹ ಬೆಳೆದು, ನಂತರ ಇಬ್ಬರು ದೈಹಿಕ ಸಂಪರ್ಕ ಹೊಂದಿದ್ದರು. ಆಕೆ ನೋಡಲು ಚೆನ್ನಾಗಿದ್ದರಿಂದ ಡ್ಯಾನ್ಸ್‌ಬಾರ್‌ವೊಂದಕ್ಕೆ ಕೆಲಸಕ್ಕೆ ಸೇರಿಸಿದ್ದ. ಆದರೆ, ಡ್ಯಾನ್ಸ್‌ಬಾರ್‌ನಲ್ಲಿನ ಹಿಂಸೆಯಿಂದ ಅನಾರೋಗ್ಯ ನೆಪವೊಡ್ಡಿ ಕೆಲಸ ಬಿಟ್ಟು ಪಶ್ಚಿಮ ಬಂಗಾಳಕ್ಕೆ ತೆರಳಿ, ಯುವಕನೊಬ್ಬನ ಜತೆ ಮದುವೆಯಾಗಿ ಜೀವನ ನಡೆಸುತ್ತಿದ್ದರು ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ಈ ಮಧ್ಯೆ ಆರೇಳು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ದಂಪತಿ ಕೋಡಿಗೇಹಳ್ಳಿಯಲ್ಲಿ ವಾಸವಾಗಿದ್ದರು. ಈ ವಿಚಾರ ತಿಳಿದ ಆರೋಪಿ, ಆಕೆಗೆ ಕರೆ ಮಾಡಿ ಮತ್ತೆ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಪೀಡಿಸುತ್ತಿದ್ದ. ಆದರೆ, ಆಕೆ ನಿರಾಕರಿಸಿದ್ದು, ತನಗೆ ಮದುವೆಯಾಗಿದೆ ಎಂದಿದ್ದಳು. ಅದರಿಂದ ಆಕ್ರೋಶಗೊಂಡ ಆರೋಪಿ, ಆಕೆ ಜತೆಗಿದ್ದ ಖಾಸಗಿ ಫೋಟೋ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಹಿಂಸೆ ನೀಡುತ್ತಿದ್ದ. ಅದರಿಂದ ನೊಂದ ಮಹಿಳೆ ಠಾಣೆಗೆ ದೂರು ನೀಡಿದ್ದಳು. ಸೆನ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.