Advertisement

Man vs Wild : ‘ನನ್ನ ಬಾಲ್ಯದ ದಿನಗಳನ್ನು ನೆನಪಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು’

10:09 AM Aug 14, 2019 | Team Udayavani |

ಡಿಸ್ಕವರಿ ಚಾನೆಲ್ ನಲ್ಲಿ ಇಂದು ಪ್ರಸಾರವಾದ ಮ್ಯಾನ್ ವರ್ಸಸ್ ವೈಲ್ಡ್ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದ ರೂವಾರಿ ಬೇರ್ ಗ್ರಿಲ್ಸ್ ಜೊತೆ ಕಾಡು ಸುತ್ತುತ್ತಾ ತಮ್ಮ ಖಾಸಗಿ ಜೀವನ , ರಾಜಕೀಯ ಜೀವನದ ಹೆಜ್ಜೆ ಗುರುತುಗಳು ಮತ್ತು ದೇಶದ ಕುರಿತಾಗಿ ತನಗಿರುವ ಕನಸುಗಳ ಕುರಿತಾದ ಮಾಹಿತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

Advertisement

ಮೋದಿ ಅವರು ಕಾರ್ಯಕ್ರಮದುದ್ದಕ್ಕೂ ಗ್ರಿಲ್ಸ್ ಜೊತೆ ಹಿಂದಿಯಲ್ಲೇ ಸಂಭಾಷಣೆ ನಡೆಸಿದ್ದು ವಿಶೇಷವಾಗಿತ್ತು. ನದಿಗಳು, ಗುಡ್ಡಗಾಡು, ಕಾಡು ಪ್ರಾಣಿಗಳು ಇವುಗಳ ಮಧ್ಯದಲ್ಲಿ ಸಾಹಸಮಯ ಯಾತ್ರೆಯಲ್ಲಿ ವಿಶ್ವದ ಎರಡನೇ ಅತೀ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ ಗ್ರಿಲ್ಸ್ ಗೆ ಜೊತೆಯಾದರು.

ನಿಮಗೆ ಪ್ರಕೃತಿಯ ಕುರಿತು ಭಯವಿಲ್ಲವೇ ಎಂದು ಪ್ರಧಾನಿ ಮೋದಿ ಅವರನ್ನು ಗ್ರಿಲ್ಸ್ ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸುತ್ತಾ ಮೋದಿ ಅವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ತಮ್ಮ ತಂದೆಯವರು ಪ್ರತೀ ಸಲ ಮಳೆಗಾಲ ಪ್ರಾರಂಭವಾದಾಗ 20-30 ಪೋಸ್ಟ್ ಕಾರ್ಡ್ ಗಳನ್ನು ಖರೀದಿಸಿ ಅದರಲ್ಲಿ ತಮ್ಮ ಸಂಬಂಧಿಕರಿಗೆ ಇಲ್ಲಿ ಮಳೆಯಾಗುತ್ತಿದೆ ಎಂದು ಪತ್ರ ಬರೆಯುತ್ತಿದ್ದರು. ಅಂದರೆ ಮಳೆ ಎಂಬುದು ಆಗೆಲ್ಲಾ ಒಂದು ಸಂಭ್ರಮದ ವಿಷಯವಾಗಿತ್ತು. ಪ್ರಕೃತಿ ಎಂಬುದು ನಮಗೆ ಎಂದೂ ಭಯದ ವಿಷಯವೇ ಆಗಿರಲಿಲ್ಲ.

ಯುವಕ ಗ್ರಿಲ್ಸ್ ಜೊತೆ ಪ್ರಧಾನಿ ಮೋದಿ ಅವರು ಉಲ್ಲಾಸದಿಂದಲೇ ಹೆಜ್ಜೆ ಹಾಕಿದರು. ಕಲ್ಲಿನಿಂದ ಕೂಡಿದ ಕಾಡು ದಾರಿಯಲ್ಲಿ ಮೋದಿ ಉತ್ಸಾಹದಿಂದಲೇ ಹಜ್ಜೆ ಹಾಕಿದ್ದು ಮತ್ತು ಮಧ್ಯದಲ್ಲಿ ಮಾತುಕತೆಯಲ್ಲೂ ತೊಡಗಿಸಿಕೊಂಡಿದ್ದು ಗಮನ ಸೆಳೆಯಿತು.

ಬಾಲ್ಯದಲ್ಲಿ ತಮ್ಮ ಕಷ್ಟದ ದಿನಗಳಲ್ಲಿ ತಮ್ಮ ತಾಯಿ ನಮ್ಮನ್ನು ಸಾಕಲು ಕಷ್ಟಪಟ್ಟ ಸಂದರ್ಭಗಳನ್ನು ಮೋದಿ ಅವರು ಗ್ರಿಲ್ಸ್ ಅವರೊಂದಿಗೆ ಹಂಚಿಕೊಂಡರು. ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದ ನೆನಪುಗಳೂ ಮೋದಿ ಅವರ ಮನಪಟಲದಲ್ಲಿ ಮಿಂಚಿ ಮರೆಯಾಯಿತು.

Advertisement

ತೆಪ್ಪದಲ್ಲಿ ಕುಳಿತು ಸರೋವರದಲ್ಲಿ ವಿಹರಿಸಿದ ಪ್ರಧಾನಿ
‘ನಿಮ್ಮ ಹಿಮಾಲಯ ಯಾತ್ರೆ ತುಂಬಾ ಕೂಲ್ ಆಗಿದೆ ಸರ್..’ ಎಂದು ತೆಪ್ಪದಲ್ಲಿ ಕುಳಿತ ಗ್ರಿಲ್ಸ್ ಉದ್ಘರಿಸುತ್ತಾರೆ. ಆದರೆ ನನಗೆ ಇದು ಹೊಸತಲ್ಲ. ನಾನು ಹಲವಾರು ಸಲ ಹಿಮಾಲಯ ಯಾತ್ರೆಯನ್ನು ಮಾಡಿದ್ದೇನೆ ಎಂದು ಮೋದಿ ಗ್ರಿಲ್ಸ್ ಅವರಿಗೆ ಹೇಳುತ್ತಾರೆ. ಸರೋವರದ ಇನ್ನೊಂದು ಬದಿಗೆ ಸಾಗಿದ ಬಳಿಕ ಗ್ರಿಲ್ಸ್ ಅವರು ಮೋದಿಯ ಕೈ ಹಿಡಿದು ಜೊತೆಯಲ್ಲೇ ಕೆಳಗಿಳಿಸುತ್ತಾರೆ.

ನಮ್ಮ ದೇಶದಲ್ಲಿ ಪ್ರತೀ ಗಿಡದಲ್ಲೂ ನಾವು ದೇವರನ್ನು ಕಾಣುತ್ತೇವೆ. ತುಳಸಿ ಗಿಡದ ಮಹತ್ವದ ಕುರಿತಾಗಿ ಮೋದಿ ಗ್ರಿಲ್ಸ್ ಅವರಿಗೆ ವಿವರಿಸುತ್ತಾರೆ.

ಭಾರತವನ್ನು ಸ್ವಚ್ಛವಾಗಿಡಲು ನಾವೇನು ಮಾಡಬಹುದು ಎಂದು ಗ್ರಿಲ್ಸ್ ಕೇಳಿದ ಪ್ರಶ್ನೆಗೆ ಮೋದಿ ನೀಡಿದ ಉತ್ತರ ಬಹಳ ಸೊಗಸಾಗಿತ್ತು. ನಮ್ಮ ದೇಶದಲ್ಲಿ ಜನರು ತಮ್ಮ ಖಾಸಗಿ ಸ್ವಚ್ಛತೆಯ ಕುರಿತಾಗಿ ಹೆಚ್ಚು ಗಮನ ನೀಡುತ್ತಾರೆ ಆದರೆ ಸಾರ್ವಜನಿಕ ಸ್ವಚ್ಛತೆಯ ಕಾಳಜಿ ಸ್ವಲ್ಪ ಕಡಿಮೆ ಇದೆ.

ಆದರೂ ಇತ್ತೀಚಿನ ದಿನಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಜನರ ಆಲೋಚನಾ ಕ್ರಮ ಬದಲಾಗುತ್ತಿದೆ. ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರೂ ಸಹ ಸ್ವಚ್ಛತೆಯ ವಿಚಾರಕ್ಕೆ ಬಹಳಷ್ಟು ಒತ್ತುಕೊಡುತ್ತಿದ್ದರು ಎಂದು ಉತ್ತರಿಸುತ್ತಾರೆ.

ತುಳಸಿ ಚಹಾ ಸೇವಿಸಿದ ಪ್ರಧಾನಿ ಮೋದಿ
ನದಿಯ ತೀರದಲ್ಲಿ ಕಲ್ಲು ನೆಲದ ಮೇಲೆ ಕುಳಿತು ಗ್ರಿಲ್ಸ್ ಅವರೊಂದಿಗೆ ತುಳಸಿ ಚಹಾ ಕುಡಿಯುತ್ತಾ ಮೋದಿ ಅವರು ಪ್ರಕೃತಿಯ ಕುರಿತಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ನಮ್ಮ ಮುಂದಿನ ಭವಿಷ್ಯಕ್ಕೆ ಈ ಪ್ರಕೃತಿಯನ್ನು ರಕ್ಷಿಸಿ ಹಸ್ತಾಂತರಿಸುವುದು ನಮ್ಮ ಜವಾಬ್ದಾರಿ ಎಂದರು.
ಪ್ರಕೃತಿಯ ಮಡಿಲಲ್ಲಿ ನಿಮ್ಮ ಜೊತೆಯಲ್ಲಿ ಕೆಲವು ಸಮಯವನ್ನು ಕಳೆಯುವ ಅವಕಾಶ ನನಗೆ ಸಿಕ್ಕಿದ್ದು ತುಂಬಾ ಸಂತಸವಾಗಿದೆ ಎಂದು ಮೋದಿ ಗ್ರಿಲ್ಸ್ ಅವರಿಗೆ ಧನ್ಯವಾದ ಸಲ್ಲಿಸುತ್ತಾರೆ.

ಮೋದಿ ಅವರ ಹೆಗಲ ಮೇಲೆ ಆತ್ಮೀಯತೆಯಿಂದ ಕೈ ಹಾಕಿದ ಗ್ರಿಲ್ಸ್ ಅವರು ಭಾರತದಂತಹ ಪ್ರಜಾಪ್ರಭುತ್ವ ದೇಶದ ಪ್ರಧಾನಿಯೊಬ್ಬರು ನನ್ನ ಮನವಿಗೆ ಬೆಲೆ ಕೊಟ್ಟು ಕಾಡಿನಲ್ಲಿ ತಮ್ಮ ಜೊತೆ ಸಮಯವನ್ನು ವ್ಯಯಿಸಿದಕ್ಕೆ ಪ್ರತಿ ಧನ್ಯವಾದ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next