Advertisement

ಮಾನವ ಅಸ್ಥಿಪಂಜರ ವಶ

06:41 AM Nov 29, 2018 | |

ಪಟ್ನಾ: ಅಬ್ಬಬ್ಟಾ ಬರೋಬ್ಬರಿ 50 ಅಸ್ಥಿಪಂಜರಗಳ ಸಾಗಾಟ! ಹೌದು, ಇಂಥದ್ದೊಂದು ಪ್ರಕರಣ ಬಿಹಾರ ದಲ್ಲಿ ಬೆಳಕಿಗೆ ಬಂದಿದೆ. ರೈಲಿನಲ್ಲಿ ಸುಮಾರು 50 ಮಾನವ ಅಸ್ಥಿಪಂಜರಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಸಂಜಯ್‌ ಪ್ರಸಾದ್‌(29)ನನ್ನು ಇಲ್ಲಿನ ಸರಣ್‌ ಪ್ರಾಂತ್ಯದ ಚಾಪ್ರಾ ರೈಲು ನಿಲ್ದಾಣ ದಲ್ಲಿ ವಶಕ್ಕೆ ಪಡೆಯಲಾಗಿದೆ. ಪೂರ್ವ ಚಂಪಾರಣ್‌ ಜಿಲ್ಲೆಯವನಾದ ಈತ ಬಲ್ಲಿಯಾ- ಸೆಲ್ಡಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಚಾಪ್ರಾ ರೈಲು ನಿಲ್ದಾಣದಲ್ಲಿ ರೈಲ್ವೇ ಪೊಲೀಸರು ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾನೆ.

Advertisement

61 ತಲೆಬುರುಡೆ, 50 ಅಸ್ಥಿಪಂಜರ!
ಬಂಧಿತ ಸಂಜಯ್‌ನಿಂದ 61 ಮಾನವ ತಲೆ ಬುರುಡೆಗಳು, 50 ಅಸ್ಥಿಪಂಜರಗಳು, ಭೂತಾನ್‌ ದೇಶದ ಕರೆನ್ಸಿ, ಭೂತಾನ್‌ ಸಹಿತ ವಿವಿಧ ದೇಶಗಳ ಸಿಮ್‌ ಕಾರ್ಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ತಲೆಬುರುಡೆ ಮತ್ತು ಅಸ್ಥಿಪಂಜರಗಳನ್ನು ಉತ್ತರ ಪ್ರದೇಶದ ಬಲ್ಲಿಯಾ ಪ್ರಾಂತ್ಯದಿಂದ ಸಂಗ್ರಹಿಸಲಾಗಿದ್ದು, ಭೂತಾನ್‌ನಲ್ಲಿರುವ ಮಂತ್ರವಾದಿಗಳಿಗೆ ನೀಡಲು ಕೊಂಡೊಯ್ಯುತ್ತಿದ್ದುದಾಗಿ ತಿಳಿಸಿದ್ದಾನೆ. ಈತನ ಹಿಂದೆ ದೊಡ್ಡ ತಂಡವೇ ಇರುವುದು ಬೆಳಕಿಗೆ ಬಂದಿದೆ.

ಪಾಶ್ಚಾತ್ಯ ರಾಷ್ಟ್ರಗಳಲ್ಲೂ  ಬೇಡಿಕೆ
ಭೂತಾನ್‌ನ ಮಂತ್ರವಾದಿಗಳಿಗಷ್ಟೇ ಅಲ್ಲ ಅಮೆರಿಕ, ಯೂರೋಪ್‌, ಚೀನ ಸಹಿತ ಹಲವಾರು ರಾಷ್ಟ್ರಗಳಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ, ಮಾನವ ಅಸ್ಥಿಪಂಜರಗಳಿಗೆ, ಅದರಲ್ಲೂ ಭಾರತದ ಅಸ್ಥಿಪಂಜರಗಳಿಗೆ ಅಪಾರ ಬೇಡಿಕೆಯಿದೆ. ವೈದ್ಯಕೀಯ ಪಠ್ಯ ಪುಸ್ತಕ ಗಳಲ್ಲಿ ನೀಡಲಾಗಿರುವ ಮಾನವ ದೇಹ ರಚನೆ ವಿವರಣೆಗೆ ಪೂರಕವಾಗಿ ಹೇಳಿ ಮಾಡಿಸಿದಂಥ ಆಕಾರ, ಗುಣಮಟ್ಟ ಹೊಂದಿರುವುದರಿಂದ ಭಾರತದ ಅಸ್ಥಿಪಂಜರಗಳಿಗೆ ಭಾರೀ ಬೇಡಿಕೆಯಿದೆ. ಇನ್ನು, ಬ್ರಿಟಿಷರ ಕಾಲದಿಂದಲೂ ಭಾರತವು ವಿಶ್ವಸಮುದಾಯಕ್ಕೆ ಅಸ್ಥಿ ಪಂಜರಗಳ ಪ್ರಮುಖ ಸರಬರಾಜುದಾರ ಎನಿಸಿಕೊಂಡಿದೆ. 1985ರಲ್ಲಿ ಅಸ್ಥಿ ಪಂಜರಗಳ ಸಾಗಣೆ ಶಿಕ್ಷಾರ್ಹ ಅಪರಾಧ ಎಂದು ಭಾರತ ಘೋಷಿಸಿದ್ದರಿಂದ ಈಗ ಇವು ಕಳ್ಳಸಾಗಣೆಯಾಗುತ್ತಿವೆ.

ಎಷ್ಟೆಷ್ಟು  ರೇಟ್‌?
ಪಾಶ್ಚಾತ್ಯ ದೇಶಗಳಲ್ಲಿ  ದೇಹದ ಒಂದೊಂದು ಮೂಳೆಗೂ ಒಂದೊಂದು ರೀತಿಯ ರೇಟ್‌ ಇದೆ. ಸದ್ಯಕ್ಕೆ ಅಮೆರಿಕ ವೈದ್ಯಕೀಯ ವಿದ್ಯಾಲಯಗಳು ನೀಡುವ ದರ ಪಟ್ಟಿ  ಇಲ್ಲಿ  ನೀಡಲಾಗಿದೆ.

ಬಿಡಿಭಾಗ                         ದರ (ಅಂದಾಜು ರೂ.ಗಳಲ್ಲಿ )
ಪೂರ್ತಿ ಅಸ್ಥಿಪಂಜರ                 2,25,000
ಅರ್ಧ ಅಸ್ಥಿಪಂಜರ                   1,82,000
ಬುರುಡೆಯ ಚಿಪ್ಪು                    8,200
ಕುತ್ತಿಗೆ ಮೂಳೆ                         9,500
ಬೆನ್ನುಮೂಳೆ                           28,300
ಕೈ ಬೆರಳು                               14,000

Advertisement
Advertisement

Udayavani is now on Telegram. Click here to join our channel and stay updated with the latest news.

Next