ಮೈಸೂರು: ಮಾನಸಿಕ ವಿಶೇಷ ಚೇತನ ಮಗನಿಗೆ ಔಷಧಿ ತರಲು ವ್ಯಕ್ತಿಯೋರ್ವ 280 ಕಿಲೋಮೀಟರ್ ಸೈಕಲ್ ತುಳಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದಲ್ಲಿ ವಾಸವಾಗಿರುವ, ವೃತ್ತಿಯಲ್ಲಿ ಗಾರೆ ಕೆಲಸಗಾರನಾಗಿರುವ ಆನಂದ್, ಮಗನಿಗಾಗಿ ಈ ಸಾಹಸ ಮೆರೆದ ಅಪ್ಪ.
ಆನಂದ್ ಅವರ ಮಾನಸಿಕ ವಿಶೇಷ ಚೇತನ ಮಗನಿಗೆ 10 ವರ್ಷಗಳಿಂದ ಮಾತ್ರೆ ಕೊಡಿಸಲಾಗುತ್ತಿದೆ. ಈ ಮಾತ್ರೆಗಳನ್ನು ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಿಂದ ತರಬೇಕಿದೆ. ಒಮ್ಮೆ ಮಾತ್ರೆ ತಪ್ಪಿದರೆ ಮತ್ತೆ 18 ವರ್ಷ ಮಾತ್ರೆ ನೀಡಬೇಕಾದ ಆತಂಕವಿದೆ. ಆನಂದ್ ಪ್ರತಿ ಬಾರಿಯೂ ತಪ್ಪಿಲ್ಲದೆ ಮಾತ್ರೆಗಳನ್ನು ತಂದುಕೊಡುತ್ತಿದ್ದರು.
ಆದರೆ ಈ ಬಾರಿ ಮಗನಿಗೆ ಔಷಧಿ ತರಲು ಲಾಕ್ ಡೌನ್ ಅಡ್ಡಿಯಾಗಿತ್ತು. ಮೈಸೂರಿನಿಂದ ಬೆಂಗಳೂರಿಗೆ ಬೈಕ್, ಆಟೋ ಹಾಗೂ ವಾಹನ ಸೌಲಭ್ಯ ಸಿಗದ ಹಿನ್ನೆಲೆಯಲ್ಲಿ ಸತತ ಮೂರು ದಿನಗಳ ಕಾಲ ಆನಂದ್ ಸೈಕಲ್ ತುಳಿದಿದ್ದಾರೆ..
ತನ್ನ ಸೈಕಲ್ ಏರಿ ಹೊರಟ ಆನಂದ್ ಕಳೆದ ಭಾನುವಾರ ಗ್ರಾಮದಿಂದ ತೆರಳಿ ಕನಕಪುರದಲ್ಲಿ ತಂಗಿದ್ದರು. ನಂತರ ಅಲ್ಲಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಮಾತ್ರೆ ಪಡೆದಿದ್ದಾರೆ. ಹೀಗೆ ಲಾಕ್ ಡೌನ್ ಕಷ್ಟದ ಸಮಯದಲ್ಲಿ ಮಗನಿಗಾಗಿ ಆನಂದ್ 280 ಕಿ.ಮೀ ದೂರ ಸೈಕಲ್ ತುಳಿದಿದ್ದಾರೆ
ಔಷಧಿ ತರಲು ಹೋಗಲು ಯಾರೂ ಬೈಕ್ ಕೊಡಲಿಲ್ಲ. ಒಂದು ದಿನ ಮಗನಿಗೆ ಮಾತ್ರೆ ತಪ್ಪಿಸಿದರೆ ತೊಂದರೆ ಆಗುತ್ತಿತ್ತು. ಮಗನಿಗೆ ಬೇಕಾದ ಮಾತ್ರೆ ಬೇರೆಲ್ಲೂ ಸಿಗುತ್ತಿರಲಿಲ್ಲ. ಹೀಗಾಗಿ ಸೈಕಲ್‌ನಲ್ಲಿಯೇ ಹೋಗಿಬಂದೆ ಎನ್ನುತ್ತಾರೆ ಆನಂದ್.