Advertisement

ಮದುವೆ ವಿಚಾರಕ್ಕೆ ಜಗಳ; ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪ್ರಿಯಕರ?

10:42 AM Mar 19, 2022 | Team Udayavani |

ಬೆಂಗಳೂರು: ಮದುವೆ ವಿಚಾರಕ್ಕೆ ಇಬ್ಬರು ಪ್ರೇಮಿಗಳ ನಡುವೆ ಉಂಟಾದ ಜಗಳದಲ್ಲಿ ಪ್ರಿಯತಮೆಗೆ, ಪ್ರಿಯಕರನೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಹತ್ಯೆಗೈದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಬಿಜಾಪುರ ಮೂಲದ ದಾನೇಶ್ವರಿ(23) ಕೊಲೆಯಾದ ಪ್ರಿಯತಮೆ. ಕೃತ್ಯ ಎಸಗಿದ್ದಾನೆ ಎಂದು ಹೇಳಲಾದ ಆಕೆಯ ಪ್ರಿಯಕರ ಶಿವಕುಮಾರ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕೃತ್ಯ ಸಂಬಂಧ ಶಿವಕುಮಾರ್‌ ವಿರುದ್ಧ ದಾನೇಶ್ವರಿ ಸಹೋದರಿ ತೇಜಸ್ವಿನಿ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸಿದ್ದಾರೆ.

ಬಿಜಾಪುರ ಮೂಲದ ದಾನೇಶ್ವರಿ ಮತ್ತು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶಿವಕುಮಾರ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವಾಗಲೇ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಆತ್ಮೀಯ ಸಂಬಂಧ ಇತ್ತು. ಈ ಮಧ್ಯೆ ಒಂದೂವರೆ ವರ್ಷದ ಹಿಂದೆ ಶಿವಕುಮಾರ್‌ ಮತ್ತು ದಾನೇಶ್ವರಿ ಬೆಂಗಳೂರಿಗೆ ಬಂದಿದ್ದು, ಶಿವಕುಮಾರ್‌ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಿಟಿಎಂ ಲೇಔಟ್‌ನ ವೀರಸಂದ್ರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ದಾನೇಶ್ವರಿ ನಗರದಲ್ಲಿ ಕೋರ್ಸ್‌ವೊಂದನ್ನು ವ್ಯಾಸಂಗ ಮಾಡುತ್ತಿದ್ದು, ಪಿಜಿಯಲ್ಲಿ ವಾಸವಾಗಿದ್ದರು. ಆಗಾಗ್ಗೆ ಶಿವಕುಮಾರ್‌ ಮನೆಗೆ ಬರುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ಭೀಕರ ಬಸ್ ಅಪಘಾತ: ನಾಲ್ವರು ಸಾವು; 20 ಅಧಿಕ ಮಂ‍ದಿ ಗಂಭೀರ

ಶಿವಕುಮಾರ್‌ ಮತ್ತು ದಾನೇಶ್ವರಿ ಬೇರೆ ಬೇರೆ ಜಾತಿಯವರಾಗಿದ್ದಾರೆ. ಹೀಗಾಗಿ ಶಿವಕುಮಾರ್‌ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಿವಕುಮಾರ್‌, ದಾನೇಶ್ವರಿಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾನೆ. ಆಕೆಗೂ ತನ್ನಿಂದ ದೂರ ಇರುವಂತೆ ಸೂಚಿಸಿದ್ದ. ಆದರೆ, ಆಕೆ “ನಿನ್ನನ್ನು ಬಿಟ್ಟು ಬೇರೆ ಯಾರನ್ನು ಮದುವೆಯಾಗುವುದಿಲ್ಲ’ ಎಂದು ಪ್ರಿಯಕರನಿಗೆ ಹೇಳಿದ್ದರು. ಆದರೆ, ಮನೆಯವರ ವಿರುದ್ಧ ಮಾಡಿಕೊಂಡು “ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ’ ಎಂದು ಶಿವಕುಮಾರ್‌ ಹೇಳಿದ್ದ ಎಂದು ಹೇಳಲಾಗಿದೆ.

Advertisement

ಪೆಟ್ರೋಲ್‌ ಸುರಿದು ಕೊಲೆ?: ಈ ನಡುವೆ ಬಿಜಾಪುರಕ್ಕೆ ಹೋಗಿದ್ದ ದಾನೇಶ್ವರಿ, ಮಾ.14ರಂದು ಬೆಂಗಳೂರಿಗೆ ವಾಪಸ್‌ ಬಂದಿದ್ದಾರೆ. ಮಾ.15ರಂದು ಪ್ರಿಯಕರ ಕೆಲಸ ಮಾಡುವ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಕಂಪನಿಗೆ ಹೋಗಿ, ಆತನ ಮನವೊಲಿಕೆಗೆ ಮುಂದಾಗಿದ್ದಾರೆ. ಆಗಲೂ ಇಬ್ಬರ ನಡುವೆ ಜಗಳವಾಗಿದೆ. ನಂತರ ಇಬ್ಬರು ಬೇರೆ -ಬೇರೆ ದಿಕ್ಕಿನಲ್ಲಿ ಹೋಗಿದ್ದಾರೆ. ಆದರೆ, ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ನಿರ್ಜನ ಪ್ರದೇಶದಲ್ಲಿ ಮತ್ತೆ ಇಬ್ಬರು ಭೇಟಿಯಾಗಿದ್ದು, ಮತ್ತೂಮ್ಮೆ ಇಬ್ಬರ ನಡುವೆ ಜಗಳ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಶಿವಕುಮಾರ್‌, ಆಕೆ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಹತ್ಯೆಗೈದಿದ್ದಾನೆ ಎಂದು ಸಂತ್ರಸ್ತೆ ಸಹೋದರಿ ದೂರಿನಲ್ಲಿ ಆರೋಪಿಸಿದ್ದಾರೆ.

ವಿಶೇಷ ತಂಡ ರಚನೆ: ಬೆಂಕಿಯ ಸುಟ್ಟಗಾಯಗಳಿಂದ ಬಳಲುತ್ತಿದ್ದ ದಾನೇಶ್ವರಿಯನ್ನು ಶಿವಕುಮಾರ್‌ ಮತ್ತು ಆತನ ಸ್ನೇಹಿತರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಆಕೆಯ ಪೋಷಕರ ಮೊಬೈಲ್‌ ನಂಬರ್‌ ಕೊಟ್ಟು ಆತ ಪರಾರಿಯಾಗಿದ್ದಾನೆ. ಹೀಗಾಗಿ ಆತ್ಮಹತ್ಯೆಯೋ? ಕೊಲೆಯೋ? ಎಂಬ ಮಾಹಿತಿ ಸಂಗ್ರಹಿಸಬೇಕಿದೆ.

ಒಂದೆಡೆ ಆತನೇ ಕೊಲೆಗೈದಿದ್ದರೆ, ಏಕೆ ಆಕೆಯನ್ನು ಆಸ್ಪತ್ರೆ ಸೇರಿಸುತ್ತಿದ್ದ? ಮತ್ತೂಂದೆಡೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಪೋಷಕರ ಮೊಬೈಲ್‌ ನಂಬರ್‌ ಕೊಟ್ಟು ಪರಾರಿಯಾಗಲು ಕಾರಣವೇನು? ಎಂಬ ಅನುಮಾನವಿದೆ. ಆತನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ನಂತರ ಸ್ಪಷ್ಟ ಮಾಹಿತಿ ದೊರೆಯಲಿದೆ. ಜತೆಗೆ ಕೃತ್ಯ ನಡೆದ ಸ್ಥಳ ಪ್ರಮುಖ ರಸ್ತೆಯಿಂದ ಅರ್ಧ ಕಿ.ಮೀಟರ್‌ ದೂರದಲ್ಲಿದೆ. ಅಲ್ಲಿ ಯಾವುದೇ ಸಿಸಿ ಕ್ಯಾಮೆರಾಗಳು ಇಲ್ಲ. ತಾಂತ್ರಿಕ ತನಿಖೆ ನಡೆಸಬೇಕಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next