ಶಿವಮೊಗ್ಗ : ಕಣ್ಣೊಳಗೆ ಜಿಗಣೆ ಹೋಗಿದೆ ಎಂದು ವೃದ್ಧರೊಬ್ಬರು ಕಣ್ಣನ್ನೆ ಕಿತ್ತುಕೊಂಡ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಭದ್ರಾವತಿ ನ್ಯೂ ಟೌನ್ ವಾಸಿ ನಂಜುಂಡಸ್ವಾಮಿ ಎನ್ನುವ 75 ವರ್ಷದ ವೃದ್ಧ ಕೈಯಾರೆ ಕಣ್ಣನ್ನು ಕಿತ್ತು ಹಾಕಿಕೊಂಡಿದ್ದಾರೆ.
ಆಟೋ ಲಿಂಕ್ಸ್ ವ್ಯವಹಾರ ನಡೆಸಿ ನಿವೃತ್ತರಾಗಿರುವ ನಂಜುಂಡಸ್ವಾಮಿ, ಜನವರಿ 12ರ ರಾತ್ರಿ 9.30ರ ಸುಮಾರಿಗೆ ಬೀಡಿ ಸೇದಲು ಹೊರಗೆ ಬಂದು ಮನೆಯ ಮುಂದೆ ಕುಳಿತಿದ್ದಾಗ ಜಿಗಣೆ ಹೋಗಿದೆ ಎಂಬ ಅನುಮಾನದಲ್ಲಿ ಬಲಗಣ್ಣಿನ ಗುಡ್ಡೆಯನ್ನೆ ಕಿತ್ತುಕೊಂಡಿದ್ದಾರೆ. ಬಳಿಕ ಮೊಮ್ಮಗ ಮದನ್ನನ್ನು ಕರೆದು ಜಿಗಣೆಯನ್ನು ಸಾಯಿಸುವಂತೆ ಸೂಚಿಸಿದ್ದಾರೆ. ಕತ್ತಲೆ ಯಲ್ಲಿ ಕಣ್ಣನ್ನೇ ಜಿಗಣೆ ಎಂದು ತಿಳಿದು ಕಲ್ಲು ಹಾಗೂ ಕೋಲಿನಿಂದ ಮೊಮ್ಮಗ ಜಜ್ಜಿದ್ದಾನೆ.
ಅಷ್ಟಾದ ನಂತರ ಹೊರ ಬಂದ ನಂಜುಂಡಸ್ವಾಮಿ ಅವರ ಮಗ ಷಣ್ಮುಖ ವಿಷಯ ತಿಳಿದು ಹೊರ ಬಂದು ಏನಾಗಿದೆ ಎಂದು ನೋಡಿದಾಗನೆಲದಲ್ಲಿ ರಕ್ತ ಚೆಲ್ಲಿದ್ದು ಹಾಗೂ ತಂದೆಯ ಕಣ್ಣಿನಿಂದ ರಕ್ತ ಬರುತ್ತಿದ್ದುದನ್ನು ಗಮನಿಸಿದ್ದಾರೆ. ಏನಾಯಿತು ಎಂದು ವಿಚಾರಿಸಿದಾಗ ತಂದೆಯ ಕಣ್ಣಿನಲ್ಲಿದ್ದ ಜಿಗಣೆಯನ್ನು ಹೊಡೆದು ಸಾಯಿಸಿದ್ದಾಗಿ ಮಗ ಮದನ್ ಹೇಳಿದ್ದಾನೆ.
ನಂತರ ಮಗ ತೋರಿಸಿದ ಜಿಗಣೆಯನ್ನು ಗಮನಿಸಿದಾಗ ನೀರು ತರಿಸಿ ಅದನ್ನು ತೊಳೆದ ನಂತರ ಅದು ಜಿಗಣೆ ಅಲ್ಲ ತಂದೆಯ ಕಣ್ಣು ಎಂದು ತಿಳಿದು ಹೌಹಾರಿದ್ದಾರೆ. ತಕ್ಷಣವೇ ತಂದೆಯನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿಂದ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೈಯಾರೆ ಕಣ್ಣಿನ ಗುಡ್ಡೆ ಕಿತ್ತುಕೊಂಡೇ ಎಂದು ವೈದ್ಯರ ಎದುರು ನಂಜುಂಡಸ್ವಾಮಿ ಹೇಳಿಕೊಂಡಿದ್ದು, ನಂಜುಂಡಸ್ವಾಮಿಯ ಬಲಗಣ್ಣನ್ನು ಶುಚಿಗೊಳಿಸಿ ಹೊಲಿಗೆ ಹಾಕಿ ವೈದ್ಯರು ಚಿಕಿತ್ಸೆ ನೀಡಿದ್ದು, ಕೆಲ ದಿನದ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಘಟನೆ ಬಗ್ಗೆ ಬೇಸರಿಕೊಳ್ಳದ ನಂಜುಂಡಸ್ವಾಮಿ ಒಂದೇ ಕಣ್ಣಿನಲ್ಲಿ ಜೀವನ ನಡೆಸುತ್ತಿದ್ದಾರೆ.