ದೆಹಲಿ: ಕಳೆದ ಕೆಲ ಸಮಯದ ಹಿಂದೆ ದೆಹಲಿಯ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡುವ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ದೆಹಲಿಯಲ್ಲೇ ನಡೆದಿದೆ.
ಬಾಲಕಿಯರ ಪಿಜಿ ವಸತಿಗೃಹದ ಹೊರಗೆ ಹಸ್ತಮೈಥುನ ಮಾಡುತ್ತಿರುವ ವ್ಯಕ್ತಿಯೊಬ್ಬನ ವಿಕೃತಿ ಬಗ್ಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಹಂಚಿಕೊಂಡಿದ್ದಾರೆ.
“ಬಾಲಕಿಯರ ಪಿಜಿಯ ಹೊರಗೆ ರಾತ್ರಿ ರಸ್ತೆಯಲ್ಲಿ ನಿಂತು ಹುಡುಗನೊಬ್ಬ ಹಸ್ತಮೈಥುನ ಮಾಡಿಕೊಳ್ಳುತ್ತಾನೆ ಎಂದು ನಮಗೆ ಎರಡು ದೂರುಗಳು ಬಂದಿವೆ. ಎರಡೂ ವೀಡಿಯೊಗಳು ಒಂದೇ ವ್ಯಕ್ತಿಯಂತೆ ತೋರುತ್ತಿವೆ. ದೆಹಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿ, ಪೊಲೀಸರಿಗೆ ಸಮನ್ಸ್ ನೀಡಲಾಗಿದೆ. ಇದು ತುಂಬಾ ಗಂಭೀರ ವಿಷಯವಾಗಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅವರು ಟ್ವೀಟ್ ಮೂಲಕ ಹೇಳಿದ್ದಾರೆ.
ಜೂನ್ 12 ರ ಮಧ್ಯರಾತ್ರಿಯ ಸುಮಾರಿಗೆ ಉತ್ತರ ದೆಹಲಿಯ ಪಿಜಿಯ ನಿವಾಸಿ ತನ್ನ ಮಹಿಳಾ ಸ್ನೇಹಿತರೊಂದಿಗೆ ಬಾಲ್ಕನಿಯಲ್ಲಿ ನಿಂತಿದ್ದಾಗ, ವ್ಯಕ್ತಿ ಹಸ್ತಮೈಥುನ ನಡೆಸಿದ್ದಾನೆ ಎಂದು ದೆಹಲಿ ಮಹಿಳಾ ಆಯೋಗಕ್ಕೆ ದೂರು ಬಂದಿದೆ ಎಂದು ಪಿಟಿಐ ವರದಿ ತಿಳಿಸಿದೆ.
“ಸಾವಿರಾರು ಮಹಿಳೆಯರು ಮತ್ತು ಹುಡುಗಿಯರು ದೆಹಲಿಯ ಪಿಜಿಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಈ ವ್ಯಕ್ತಿ ಒಂದೇ ಪಿಜಿಯ ಹೊರಗೆ ಒಂದಕ್ಕಿಂತ ಹೆಚ್ಚು ಬಾರಿ ಅಶ್ಲೀಲ ಕ್ರಿಯೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಅಪರಾಧಿಗಳು ಏಕೆ ಮತ್ತು ಹೇಗೆ ಧೈರ್ಯಶಾಲಿಯಾಗಿದ್ದಾರೆ? ಮೊದಲು ಅವರ ವಿರುದ್ಧ ಪೊಲೀಸರು ಏಕೆ ಕ್ರಮ ಕೈಗೊಂಡಿಲ್ಲ? ಅಪರಾಧಗಳನ್ನು ತಡೆಯಲು ಎಫ್‌ಐಆರ್ ದಾಖಲಿಸಬೇಕು ಮತ್ತು ಈ ವ್ಯಕ್ತಿಯನ್ನು ಪೊಲೀಸರು ತಕ್ಷಣ ಬಂಧಿಸಬೇಕು” ಎಂದು ಸ್ವಾತಿ ಮಲಿವಾಲ್ ಹೇಳಿರುವುದಾಗಿ ಪಿಟಿಐ ವರದಿ ತಿಳಿಸಿದೆ.