ಬೆಂಗಳೂರು: ಕೆಲಸ ಕೊಟ್ಟ ಸಂಸ್ಥೆ ಇನ್ನಿಲ್ಲದ ಬೆದರಿಕೆ ಹಾಕಿದ್ದ ಸಾಫ್ಟ್ ವೇರ್ ಇಂಜಿನಿಯರ್‌ಗೆ ಕೆಲಸದಿಂದ ತೆಗೆದುಹಾಕಲು ಹೈಕೋರ್ಟ್ ಅಸ್ತು ಎಂದಿದೆ.
“”ನನ್ನ ಬಳಿ ಒಂದು ಗನ್, 8 ಬಾಂಬ್ ಹಾಗೂ 2 ಕತ್ತಿಗಳಿವೆ. ನನ್ನ ತಂದೆ ವಕೀಲರಾಗಿದ್ದು, ಚಿಕ್ಕಪ್ಪ ಶಾಸಕರಾಗಿದ್ದಾರೆ. ನಿಮ್ಮ ವಿರುದ್ಧ ಯಾವುದೇ ರೀತಿಯ ವಿಧ್ವಂಸಕ ಕೃತ್ಯವೆಸಗಲು ನಾನು ಸಮರ್ಥನಿದ್ದೇನೆ” ಎಂದು ಕೆಲಸ ಮಾಡುತ್ತಿದ್ದ ಸಂಸ್ಥೆಯ ಆಡಳಿತ ಮಂಡಳಿಗೇ ಇ-ಮೇಲ್ ಕಳುಹಿಸಿ ಬೆದರಿಕೆಯೊಡ್ಡಿದ್ದ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಕೆಲಸದಿಂದ ಬಿಡುಗಡೆಗೊಳಿಸಲು ಉದ್ಯೋಗ ನೀಡಿದ್ದ ಸಂಸ್ಥೆಗೆ ಹೈಕೋರ್ಟ್ ಅನುಮತಿ ನೀಡಿದೆ.
ಶಿಸ್ತು ಉಲ್ಲಂಘನೆಯ ಕಾರಣಕ್ಕೆ ವಜಾಗೊಂಡಿದ್ದ ಆಶೀಶ್ ಕುಮಾರ್ ನಾಥ್ ಎಂಬಾತನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡು, ಎಲ್ಲ ಹಿಂಬಾಕಿ ಪಾವತಿಸುವಂತೆ ಬೆಂಗಳೂರಿನ 3ನೇ ಹೆಚ್ಚುವರಿ ಕಾರ್ಮಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಜೆಪಿ ನಗರದಲ್ಲಿ ಶಾಖೆ ಹೊಂದಿರುವ, ಅಮೆರಿಕ ಮೂಲದ ಸಾಫ್ಟ್‌ವೇರ್ ಕಂಪನಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು.
ಕಂಪನಿಯ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆಶೀಶ್ ಕುಮಾರ್‌ನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚಿಸಿ 2021ರ ಫೆ.26ರಂದು ಕಾರ್ಮಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದುಪಡಿಸಿದೆ. ಆದರೆ, ಯಾವುದೇ ಶಿಸ್ತು ವಿಚಾರಣೆ ನಡೆಸದೆ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿದ್ದ ಹಿನ್ನೆಲೆಯಲ್ಲಿ ಆತನಿಗೆ 10 ಲಕ್ಷ ರೂ. ಪರಿಹಾರ ಪಾವತಿಸುವಂತೆ ಉದ್ಯೋಗದಾತ ಕಂಪನಿಗೆ ನಿರ್ದೇಶಿಸಿದೆ.
ಅರ್ಜಿದಾರ ಕಂಪನಿಯಲ್ಲಿ ಸೀನಿಯರ್ ಕ್ವಾಲಿಟಿ ಇಂಜಿನಿಯರಿಂಗ್ ಡೆವಲಪರ್ ಆಗಿ 2015ರ ಫೆ.4ರಂದು ಆಶೀಶ್ ಕುಮಾರ್ ಕೆಲಸಕ್ಕೆ ಸೇರಿದ್ದರು. ಅವರಿಗೆ ವಾರ್ಷಿಕ 24.75 ಲಕ್ಷ ರೂ. ವೇತನ ನಿಗದಿಪಡಿಸಲಾಗಿತ್ತು. ಅಮೆರಿಕದಲ್ಲಿ 3 ವಾರಗಳ ತರಬೇತಿಯನ್ನೂ ನೀಡಲಾಗಿತ್ತು. ಅಲ್ಲಿಂದ ಹಿಂದುರಿಗಿದ ನಂತರ ಅವರನ್ನು ಬೆಂಗಳೂರಿನ ಕಚೇರಿಗೆ ನಿಯೋಜಿಸಲಾಗಿತ್ತು. ಆದರೆ, ಆಶೀಶ್‌ಗೆ ಅಮೆರಿಕದಲ್ಲಿ ಇದ್ದುಕೊಂಡು ಕೆಲಸ ಮಾಡುವ ಇರಾದೆ ಹೊಂದಿದ ಈ ವಿಚಾದಲ್ಲಿ ಕಂಪೆನಿಯೊಂದಿಗೆ ಆಗಾಗ ತಗಾದೆ ತೆಗೆಯುತ್ತಿದ್ದ. ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ. ಕಂಪೆನಿ ಕೆಲಸದಿಂದ ವಜಾ ಮಾಡಿತ್ತು. ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಕಾರ್ಮಿಕ ನ್ಯಾಯಾಲಯ ಆದೇಶಿಸಿತ್ತು. ಕಂಪೆನಿ ಹೈಕೋರ್ಟ್ ಮೆಟ್ಟಿಲೇರಿತ್ತು.