ದೆಹಲಿ: ಸೈಬರ್ ಕ್ರೈಮ್ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಯಾವುದೋ ಒಂದು ಲಿಂಕ್, ಮೆಸೇಜ್, ಕಾಲ್ ನಿಂದಲೂ ಲಕ್ಷಂತಾರ ರೂ.ವನ್ನು ಕಳೆದುಕೊಳ್ಳುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇಂಥದ್ದೇ ಒಂದು ಘಟನೆ ದೆಹಲಿಯ ಘಿಟೋರ್ನಿ ಪ್ರದೇಶದಲ್ಲಿ ನಡೆದಿದೆ.
ವಿಕಾಸ್ ಕಟಿಯಾರ್ ಎಂಬ ಯುವಕ ಕಳೆದ ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ʼ 91ಮೊಬೈಲ್ಸ್. ಕಾಮ್ʼ ಎನ್ನುವ ಪೇಜ್ ವೊಂದಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಐಫೋನ್ ಭಾರೀ ಡಿಸ್ಕೌಂಟ್ ಬೆಲೆಯಲ್ಲಿ ಮಾರುವ ಬಗ್ಗೆ ಜಾಹೀರಾತನ್ನು ನೋಡಿದ್ದಾರೆ. ಕೂಡಲೇ ಇದರ ಬಗ್ಗೆ ಆಕರ್ಷಿತನಾಗಿ ಐಫೋನ್ ಖರೀದಿಸಬೇಕೆಂದು ನಿರ್ಧರಿಸುತ್ತಾರೆ.
ಇದಾದ ಬಳಿಕ ಪೇಜ್ ಅಧಿಕೃತವೇ ಎನ್ನುವುದನ್ನು ಎರಡು, ಮೂರು ಜನರ ಬಳಿಕ ವಿಕಾಸ್ ಕೇಳುತ್ತಾರೆ. ಪೇಜ್ ನಲ್ಲಿನ ಜಾಹೀರಾತನ್ನು ನಂಬಬಹುಹು ಎಂದು ವಿಕಾಸ್ ಐಫೋನ್ ಕೊಳ್ಳಲು ಮುಂದಾಗುತ್ತಾರೆ. ಫೆ. 6 ರಂದು ವಿಕಾಸ್ ವೆಬ್ ಸೈಟ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡುತ್ತಾರೆ.
ಐಫೋನ್ ಕೊಳ್ಳಲು 28 ಸಾವಿರ ರೂ. ಮುಂಗಡ ಪಾವತಿಯನ್ನು ಪಾವತಿಸಬೇಕೆಂದು ವ್ಯಕ್ತಿ ಹೇಳುತ್ತಾರೆ. ಇದನ್ನು ಪಾವತಿಸಿದ ಬಳಿಕ ಮತ್ತೊಂದು ಸಂಖ್ಯೆಯಿಂದ ವಿಕಾಸ್ ಅವರಿಗೆ ಕರೆ ಮಾಡಿ ಕಸ್ಟಮ್ಸ್ ಮತ್ತು ಇತರ ತೆರಿಗೆಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಹಣ ಪಾವತಿಸಬೇಕೆಂದು ಹೇಳುತ್ತಾರೆ.
ಒಟ್ಟು ವಿಕಾಸ್ 28,69,850 ( 29 ಲಕ್ಷದ ಹತ್ತಿರ) ಹಣವನ್ನು ಬೇರೆ ಬೇರೆ ಖಾತೆಗೆ ಪಾವತಿಸುತ್ತಾರೆ. ಆದರೆ ಆ ಬಳಿಕ ತನಗೆ ವಂಚಿಸಿದ್ದಾರೆ ಎನ್ನುವುದು ವಿಕಾಸ್ ಅವರಿಗೆ ತಿಳಿದಿದೆ. ದೆಹಲಿಯ ನೈಋತ್ಯ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.