ಚೆನ್ನೈ:ಸರ್ಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ ಪತ್ನಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪಾಠ ಮಾಡುತ್ತಿದ್ದ ವೇಳೆಯಲ್ಲಿಯೇ ಏಕಾಏಕಿ ತರಗತಿಗೆ ನುಗ್ಗಿದ ಪತಿ ವಾಗ್ವಾದಕ್ಕೆ ಇಳಿದಿದ್ದು, ಇಬ್ಬರ ನಡುವಿನ ಮಾತಿನ ಚಕಮಕಿ ತಾರಕ್ಕೇರುತ್ತಿದ್ದಂತೆಯೇ ವಿದ್ಯಾರ್ಥಿಗಳ ಸಮ್ಮುಖದಲ್ಲಿಯೇ ಪತ್ನಿಯನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ತಮಿಳುನಾಡಿನ ಮದುರೈನಲ್ಲಿ ನಡೆದಿದೆ.
ಮದುರೈನ ತಿರುಮಂಗಲಂನಲ್ಲಿರುವ ಪಿಕೆಎನ್ ಬಾಲಕರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳ ಸಮ್ಮುಖದಲ್ಲಿಯೇ ಕೊಲೆ ಘಟನೆ ನಡೆದಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮಾಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ವರದಿ ವಿವರಿಸಿದೆ.
ಪತಿ ಗುರು ಮುನೀಶ್ವರನ್(37ವರ್ಷ) ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಕಳೆದ ಕೆಲವು ತಿಂಗಳಿನಿಂದ ಪತ್ನಿ ಜಿ.ರತಿದೇವಿ(35) ಪೋಷಕರ ಜತೆ ವಾಸವಾಗಿದ್ದರು. ರತಿದೇವಿ ವಿಜ್ಞಾನ ಟೀಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಪತಿ ಚೆನ್ನೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ವರದಿ ತಿಳಿಸಿದೆ.
ಸೋಮವಾರ ಮಧ್ಯಾಹ್ನ 3.30ಕ್ಕೆ ರತಿದೇವಿಯನ್ನು ಭೇಟಿಯಾಗಲು ಮುನೀಶ್ವರನ್ ಆಗಮಿಸಿದ್ದ. ಕ್ಲಾಸ್ ರೂಂಗೆ ತೆರಳಿ ವಾಗ್ವಾದ ನಡೆಸುತ್ತಲೇ ಪತ್ನಿಗೆ ಚೂರಿಯಿಂದ ಇರಿದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಮುನೀಶ್ವನ್ ನನ್ನು ಪೊಲೀಸರು ಬಂಧಿಸಿದ್ದು, ರೇವತಿ ಮೃತ ಶರೀರವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.