Advertisement

ಡಿಜಿಟಲ್‌ ವಹಿವಾಟಿನಿಂದ ಪ್ರಾಮಾಣಿಕತೆಗೆ ಪ್ರೇರಣೆ : ಪ್ರಧಾನಿ ಮೋದಿ

10:20 AM Apr 25, 2022 | Team Udayavani |

ಹೊಸದಿಲ್ಲಿ: “ದೇಶದಲ್ಲೀಗ ಪ್ರತೀ ದಿನ 20 ಸಾವಿರ ಕೋಟಿ ರೂ.ಗಳ ನಗದುರಹಿತ ವಹಿವಾಟು ನಡೆಯುತ್ತಿದೆ. ಮಾರ್ಚ್‌ ತಿಂಗಳಲ್ಲಿ ಯುಪಿಐ ವಹಿವಾಟು 10 ಲಕ್ಷ ಕೋಟಿ ರೂ.ಗೆ ತಲುಪಿದೆ. ಡಿಜಿಟಲ್‌ ವಹಿವಾಟಿನಿಂದ ಅನುಕೂಲ ಮಾತ್ರವಲ್ಲ, ಪ್ರಾಮಾಣಿಕತೆಯ ವಾತಾವರಣವೂ ನಿರ್ಮಾಣವಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ರವಿವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ, 88ನೇ ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ ಅವರು, ಸಣ್ಣಪುಟ್ಟ ಆನ್‌ಲೈನ್‌ ಪಾವತಿಯೂ ದೊಡ್ಡ ಡಿಜಿಟಲ್‌ ಆರ್ಥಿಕತೆಯನ್ನು ನಿರ್ಮಿಸಲು ಸಹಾಯ ಮಾಡುತ್ತಿವೆ. ಇದರಿಂದ ಹಲವಾರು ಹೊಸ ಫಿನ್‌ಟೆಕ್‌ ಸ್ಟಾರ್ಟ್‌ಅಪ್‌ಗ್ಳು ಹುಟ್ಟಲಾರಂಭಿಸಿವೆ ಎಂದಿದ್ದಾರೆ.

ಕ್ಯಾಷ್‌ಲೆಸ್‌ ಡೇ ಔಟ್‌: ನೀವೆಲ್ಲರೂ ನಗದಿಲ್ಲದೇ ಹೊರಹೋಗಿ (ಕ್ಯಾಷ್‌ಲೆಸ್‌ ಡೇ ಔಟ್‌), ನಿಮ್ಮ ಡಿಜಿಟಲ್‌ ಪಾವತಿಯ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಿ. ಅದು ದೇಶದ ಇತರರಿಗೂ ಸ್ಫೂರ್ತಿಯ ಮೂಲ ವಾಗಬಹುದು ಎಂದೂ ಮೋದಿ ಸಲಹೆ ನೀಡಿದ್ದಾರೆ.

ಮೋದಿ ಹೇಳಿದ್ದೇನು?
ಅಮೃತ ಸರೋವರ ಯೋಜನೆ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಅವಧಿಯಲ್ಲಿ ದೇಶಾದ್ಯಂತ ಪ್ರತೀ ಜಿಲ್ಲೆಯಲ್ಲೂ 75 “ಅಮೃತ ಸರೋವರ’ಗಳನ್ನು ನಿರ್ಮಿಸುವ ಯೋಜನೆಯನ್ನು ನಾವು ಹಾಕಿಕೊಂಡಿದ್ದೇವೆ. ನೀವಿರುವ ಜಾಗದಲ್ಲಿ ಈಗ ಸಾಕಷ್ಟು ನೀರಿನ ಲಭ್ಯತೆ ಇರಬಹುದು. ಆದರೆ, ನೀರಿನ ಅಭಾವವಿರುವಲ್ಲಿ ವಾಸಿಸುವ ಜನರಿಗೆ ಒಂದು ಹನಿ ನೀರು ಕೂಡ ಅಮೃತವಿದ್ದಂತೆ. ಹೀಗಾಗಿ, ಎಲ್ಲರೂ ಜಲಸಂರಕ್ಷಣೆಗೆ ಬದ್ಧರಾಗಿರಬೇಕು.

ಕೊರೊನಾ ಮುನ್ನೆಚ್ಚರಿಕೆ ಇರಲಿ: ಮೇ ತಿಂಗಳಲ್ಲಿ ಈದ್‌, ಅಕ್ಷಯ ತೃತೀಯ, ಬುದ್ಧ ಪೂರ್ಣಿಮೆ ಸೇರಿದಂತೆ ಹಲವು ಹಬ್ಬಗಳಿದ್ದು, ಎಲ್ಲರಿಗೂ ಹಬ್ಬದ ಶುಭಾಶಯಗಳು. ಆದರೆ ಇವುಗಳ ನಡುವೆಯೇ ಕೊರೊನಾ ಬಗ್ಗೆಯೂ ಜನ ಎಚ್ಚರಿಕೆಯಿಂದಿರಬೇಕು. ಮಾಸ್ಕ್ಧಾರಣೆ, ಕೈಗಳನ್ನು ಸ್ವತ್ಛವಾಗಿಟ್ಟುಕೊಳ್ಳುವುದು ಸೇರಿದಂತೆ ಎಲ್ಲ ಮುನ್ನೆಚ್ಚರಿಕ ಕ್ರಮಗಳನ್ನು ಪಾಲಿಸಬೇಕು.

Advertisement

ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿ: ಎ.14ರಂದು ಲೋಕಾರ್ಪಣೆ ಗೊಂಡ “ಪ್ರಧಾನ ಮಂತ್ರಿಗಳ ಸಂಗ್ರಹಾಲಯ’ವು ದೇಶದ ಯುವಜನರನ್ನು ಆಕರ್ಷಿಸುತ್ತಿದೆ. ಎಲ್ಲರೂ ಇಲ್ಲಿಗೊಮ್ಮೆ ಭೇಟಿ ಕೊಡಿ. ರಜಾದಿನಗಳಲ್ಲಿ ಸ್ಥಳೀಯ ಮ್ಯೂಸಿಯಂಗಳಿಗೂ ಭೇಟಿ ನೀಡಿ, “ಮ್ಯೂಸಿಯಂ ಮೆಮೊರೀಸ್‌’ ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ನಿಮ್ಮ ಅನುಭವವನ್ನು ಹಂಚಿಕೊಳ್ಳಿ. ಮೇ 18ರಂದು ನಾವು ವಿಶ್ವ ಮ್ಯೂಸಿಯಂ ದಿನವನ್ನು ಸ್ಥಳೀಯ ಸಂಗ್ರಹಾಲಯಗಳಿಗೆ ಭೇಟಿ ನೀಡುವ ಮೂಲಕ ಆಚರಿಸೋಣ.

ಗಣಿತಕ್ಕೆ ಭಾರತದ ಕೊಡುಗೆ: ಭಾರತೀಯರಿಗೆ ಯಾವತ್ತೂ ಗಣಿತವು ಕಬ್ಬಿಣದ ಕಡಲೆಯೇ ಅಲ್ಲ. ಇದಕ್ಕೆ ನಮ್ಮ ವೇದಿಕ್‌ ಗಣಿತವೇ ಕಾರಣ. ಭಾರತೀಯರು ಶೂನ್ಯವನ್ನು ಕಂಡುಹಿಡಿಯದೇ ಇರುತ್ತಿದ್ದರೆ ಜಗತ್ತಿನಲ್ಲಿ ಇಷ್ಟೊಂದು ವೈಜ್ಞಾನಿಕ ಪ್ರಗತಿಯೇ ಆಗುತ್ತಿರಲಿಲ್ಲ. ಕ್ಯಾಲ್ಕುಲಸ್‌ನಿಂದ ಕಂಪ್ಯೂಟರ್‌ವರೆಗೆ ಎಲ್ಲ ವೈಜ್ಞಾನಿಕ ಸಂಶೋಧನೆಗಳೂ ಶೂನ್ಯವನ್ನೇ ಆಧರಿಸಿರುವಂಥದ್ದು. ಹೀಗಾಗಿ ಗಣಿತ ಕ್ಷೇತ್ರಕ್ಕೆ ಭಾರತೀಯರ ಕೊಡುಗೆ ಅಪಾರವಾದದ್ದು.

Advertisement

Udayavani is now on Telegram. Click here to join our channel and stay updated with the latest news.

Next