ಪಟ್ನಾ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಕೊಲೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಬಿಹಾರದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪ್ರಮೋದ್ ಕುಮಾರ್ ಅಲಿಯಾಸ್ ಪೊಯಾಮಾ ಎಂಬಾತನನ್ನು ಪೊಲೀಸರು ಪಟ್ನಾ ಜಿಲ್ಲೆಯ ಪತುಹಾ ಎಂಬಲ್ಲಿ ನಿನ್ನೆ ಶುಕ್ರವಾರ ಬಂಧಿಸಿದರೆಂದು ಪಟ್ನಾದ ಹಿರಿಯ ಪೊಲೀಸ್ ಸುಪರಿಂಟೆಂಡೆಂಟ್ ಮನು ಮಹಾರಾಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಅಂಗ ರಕ್ಷಕರನ್ನು ತಾನು ಸ್ಫೋಟಿಸುವುದಾಗಿ ಆರೋಪಿಯು ಒಡ್ಡಿರುವ ಬೆದರಿಕೆಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಇದು ವೈರಲ್ ಆದೊಡನೆಯೇ ಕ್ರಿಯಾಶೀಲರಾದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಸೆರೆ ಹಿಡಿದರು ಎಂದು ಮನು ಮಹಾರಾಜ್ ಹೇಳಿದರು.
ಇಂತಹ ಕೊಲೆ ಬೆದರಿಕೆಯ ವಿಡಿಯೋವನ್ನು ಆರೋಪಿಯು ಸಾಮಾಜಿಕ ಮಾಧ್ಯಮ ತಾಣಕ್ಕೆ ಏಕಾಗಿ ಪೋಸ್ಟ್ ಮಾಡಿದ್ದಾನೆ ಎಂಬುದನ್ನು ಅರಿಯಲು ಪೊಲೀಸರೀಗ ಯತ್ನಿಸುತ್ತಿದ್ದಾರೆ.
ದೃಢೀಕರಿಸಲ್ಪಡದ ವರದಿಗಳ ಪ್ರಕಾರ ಆರೋಪಿ ತರುಣನಿಗೆ ರಾಜ್ಯದಲ್ಲಿನ ಮರಳು ಬಿಕ್ಕಟ್ಟಿನಿಂದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಸಿಟ್ಟಿತ್ತು; ಇದರಿಂದಾಗಿ ಆತನ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿತ್ತು ಎನ್ನಲಾಗಿದೆ.
ಬಿಹಾರದ ಬಕ್ಸಾರ್‌ನ ನಂದನ್ ಗ್ರಾಮದ ಲ್ಲಿ ನಿನ್ನೆ ನಿತೀಶ್ ಅವರು ಸಮೀಕ್ಷಾ ಯಾತ್ರೆಯನ್ನು ಕೈಗೊಂಡಿದ್ದಾಗ ಅವರ ವಾಹನಗಳ ಸಾಲಿನ ಮೇಲೆ ಕಲ್ಲೆಸೆತದ ಘಟನೆ ನಡೆದಿತ್ತು. ಅದರ ಮರುದಿನವೇ ಇದೀಗ ನಿತೀಶ್ ಕೊಲೆ ಆರೋಪಿ ಸೆರೆಯಾಗಿದ್ದಾನೆ.