Advertisement

ಯುವಕನ ಪ್ರಾಣಕ್ಕೆ ಎರವಾದ ಎಂಆರ್‌ಐ ಸೆಳೆತ

06:00 AM Jan 29, 2018 | Team Udayavani |

ಮುಂಬಯಿ: ಎಂಆರ್‌ಐ ಸ್ಕ್ಯಾನ್‌ ಕೊಠಡಿಯಲ್ಲಿ ನಡೆದ ಆಘಾತಕಾರಿ ವಿದ್ಯಮಾನವೊಂದು ಯುವಕನೊಬ್ಬನನ್ನು ಬಲಿ ತೆಗೆದುಕೊಂಡಿದೆ. ಮುಂಬಯಿಯ ನಾಯರ್‌ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಈ ದುರ್ಘ‌ಟನೆ ಸಂಭವಿಸಿದೆ. ಆಮ್ಲಜನಕದ ಸಿಲಿಂಡರ್‌ ಹಿಡಿದುಕೊಂಡು ಎಂಆರ್‌ಐ (ಮ್ಯಾಗ್ನೆಟಿಕ್‌ ರೆಸೋ ನೆನ್ಸ್‌ ಇಮೇಜಿಂಗ್‌) ಸ್ಕ್ಯಾನ್‌ ಕೊಠಡಿಯೊಳಗೆ ಪ್ರವೇಶಿಸಿದ ಯುವಕನೊಬ್ಬನನ್ನು ಎಂಆರ್‌ಐ ಯಂತ್ರದಲ್ಲಿನ ಕಾಂತಕ್ಷೇತ್ರವು ತನ್ನತ್ತ ಸೆಳೆದು ಕೊಂಡಿದ್ದೇ ಆತನ ಸಾವಿಗೆ ಕಾರಣ.

Advertisement

ಆಸ್ಪತ್ರೆಯ ಸಿಬಂದಿಯ ಬೇಜವಾಬ್ದಾರಿತನದಿಂದ ಘಟನೆ ನಡೆದಿದ್ದು, ವೈದ್ಯ ಸಿದ್ಧಾಂತ್‌ ಶಾ, ವಾರ್ಡ್‌ ಬಾಯ್‌ ವಿಠಲ್‌ ಚವಾಣ್‌ ಮತ್ತು ವಾರ್ಡ್‌ ಸಹಾಯಕ ಸಿಬಂದಿ ಸುನಿತಾ ಸುರ್ವೇ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತ ಯುವಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಆಗಿದ್ದೇನು?: ತನ್ನ ಸಂಬಂಧಿಯೊಬ್ಬರನ್ನು ಎಂಆರ್‌ಐ ಸ್ಕ್ಯಾನ್‌ ಮಾಡಿಸಲೆಂದು ರಾಜೇಶ್‌ ಮರು (32) ಆಸ್ಪತ್ರೆಗೆ ಬಂದಿದ್ದರು. ವಾರ್ಡ್‌ ಬಾಯ್‌ಯ ಸಲಹೆಯಂತೆ ರಾಜೇಶ್‌ ಆಮ್ಲಜನಕದ ಸಿಲಿಂಡರ್‌ ಅನ್ನು ಹೊತ್ತುಕೊಂಡು ಎಂಆರ್‌ಐ ಸ್ಕ್ಯಾನ್‌ ಕೊಠಡಿಯೊಳಕ್ಕೆ ಪ್ರವೇಶಿಸಿದರು. ನಿಯಮ ಪ್ರಕಾರ ಯಂತ್ರವು ಚಾಲನೆಯಲ್ಲಿರುವಾಗ ಯಾವುದೇ ಲೋಹದ ವಸ್ತುವನ್ನು ಕೊಠಡಿಯೊಳಗೆ ತರುವಂತಿಲ್ಲ. ಆದರೆ ಈ ಬಗ್ಗೆ ತಿಳಿದಿಲ್ಲದ ಕಾರಣ ರಾಜೇಶ್‌ ಸಿಲಿಂಡರ್‌ನೊಂದಿಗೇ ಒಳಕ್ಕೆ ಹೋದರು. ಅಲ್ಲಿ ರೋಗಿಗೆ ಸಹಾಯ ಮಾಡಲೆಂದು ರಾಜೇಶ್‌ ಯಂತ್ರದ ಸಮೀಪಕ್ಕೆ ಬಂದೊಡನೆ ಅದರಲ್ಲಿರುವ ಪ್ರಬಲ ಕಾಂತಕ್ಷೇತ್ರವು ರಾಜೇಶ್‌ ಹಾಗೂ ಸಿಲಿಂಡರ್‌ ಎರಡನ್ನೂ ದಿಢೀರನೆ ತನ್ನತ್ತ ಎಳೆದುಕೊಂಡಿತು. ಆ ರಭಸಕ್ಕೆ ಒಂದೆಡೆ ರಾಜೇಶ್‌ನ ಒಂದು ಕೈ ಯಂತ್ರದೊಳಗೆ ಸಿಲುಕಿಕೊಂಡರೆ, ಮತ್ತೂಂದು ಕೈಯ್ಯಲ್ಲಿದ್ದ ಸಿಲಿಂಡರ್‌ನ ಮುಚ್ಚಳ ತೆರೆದು ದ್ರವರೂಪಕ ಆಮ್ಲಜನಕ ಸೋರಿಕೆಯಾಗತೊಡಗಿತು. ಆ ಆಮ್ಲಜನಕ ರಾಜೇಶ್‌ನ ದೇಹದೊಳಕ್ಕೆ ಸೇರಿದೊಡನೆ ಅವರ ದೇಹವು ಉಬ್ಬಿಕೊಂಡು, ಕ್ಷಣಮಾತ್ರದಲ್ಲೇ ಅವರು ಕೊನೆಯುಸಿರೆಳೆದರು ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಈ ಎಲ್ಲವೂ ಕೇವಲ 2 ನಿಮಿಷಗಳೊಳಗೆ ಘಟಿಸಿತು. ಆದರೆ ಅಲ್ಲಿದ್ದ ರೋಗಿ ಹಾಗೂ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಂತಕ್ಷೇತ್ರದ ಶಕ್ತಿಯೆಷ್ಟು?
ಹೆಚ್ಚು ಪವರ್‌ಫ‌ುಲ್‌ ಎಂಆರ್‌ಐ ಯಂತ್ರಗಳಲ್ಲಿ ಉತ್ಪತ್ತಿಯಾಗುವ ಕಾಂತೀಯಕ್ಷೇತ್ರವು ಭೂಮಿಯ ಕಾಂತಕ್ಷೇತ್ರಕ್ಕಿಂತ 1.40 ಲಕ್ಷ ಪಟ್ಟು ಹೆಚ್ಚು ಬಲಶಾಲಿಯಾಗಿರುತ್ತದೆ. ಕಾಂತಕ್ಷೇತ್ರದ ಶಕ್ತಿಯನ್ನು ಟೆಸ್ಲಾ ಮೂಲಕ ಅಳೆಯಲಾಗುತ್ತದೆ. ಸಂಶೋಧನೆಗಳಲ್ಲಿ ಬಳಸುವಂಥ ಎಂಆರ್‌ಐ ಯಂತ್ರಗಳ ಕಾಂತಕ್ಷೇತ್ರವು ಗರಿಷ್ಠ ಎಂದರೆ 60 ಟೆಸ್ಲಾವರೆಗೆ ಇರುತ್ತದೆ. ನಾವೀಗ ಆಸ್ಪತ್ರೆಗಳಲ್ಲಿ ನೋಡುವಂಥ ಯಂತ್ರಗಳಲ್ಲಿನ ಶಕ್ತಿಯು 0.5 ಟೆಸ್ಲಾದಿಂದ 3.0 ಟೆಸ್ಲಾವರೆಗೆ ಇರುತ್ತದೆ. 1.5 ಟೆಸ್ಲಾ ಕಾಂತಕ್ಷೇತ್ರವು ಭೂಮಿಯ ಕಾಂತಕ್ಷೇತ್ರಕ್ಕಿಂತ 21 ಸಾವಿರ ಪಟ್ಟು ಹೆಚ್ಚು ಶಕ್ತಿ ಹೊಂದಿರುತ್ತದೆ.

ಎಂಆರ್‌ಐ ಯಂತ್ರದ ಅಪಾಯಗಳು
ಎಂಆರ್‌ಐನಲ್ಲಿರುವ ಕಾಂತಕ್ಷೇತ್ರವು ಅತ್ಯಂತ ಪ್ರಬಲವಾಗಿರುತ್ತದೆ. ಅದರ ವೇಗೋತ್ಕರ್ಷ ಶಕ್ತಿ ಎಷ್ಟಿರುತ್ತದೆಂದರೆ ಹೇರ್‌ಪಿನ್‌ನಿಂದ ಹಿಡಿದು ಸಿಲಿಂಡರ್‌ವರೆಗೂ ಯಾವುದೇ ಲೋಹದ ವಸ್ತುವನ್ನು ಅತ್ಯಂತ ಬಲವಾಗಿ ತನ್ನತ್ತ ಸೆಳೆದುಕೊಳ್ಳುವಂಥ ಶಕ್ತಿಯಿರುತ್ತದೆ. ಉದಾಹರಣೆಗೆ 1.5 ಟೆಸ್ಲಾ  ಸಾಮರ್ಥ್ಯದ ಕಾಂತಕ್ಷೇತ್ರವು ಪೇಪರ್‌ ಕ್ಲಿಪ್‌, ಹೇರ್‌ಪಿನ್‌ನಂಥ ವಸ್ತುಗಳನ್ನು ಗಂಟೆಗೆ 40 ಮೈಲು ವೇಗದಲ್ಲಿ ಎಳೆದುಕೊಳ್ಳುತ್ತದೆ. ಲೋಹದ ವಸ್ತುವು ನಿಮ್ಮ ದೇಹದಲ್ಲಿದ್ದರೂ ಅದನ್ನು ಎಳೆಯುವಂಥ ಸಾಮರ್ಥ್ಯ ಆ ಕಾಂತಕ್ಷೇತ್ರಕ್ಕಿರುವ ಕಾರಣ ಗಂಭೀರ ಗಾಯ ಹಾಗೂ ಅಪಾಯ ಖಚಿತ. ಇದೇ ಕಾರಣಕ್ಕಾಗಿ ಎಂಆರ್‌ಐ ಸ್ಕ್ಯಾನ್‌ ಕೊಠಡಿ ಪ್ರವೇಶಿಸುವಾಗ ರೋಗಿಗಳಿಗೆ ತಮ್ಮ ದೇಹದಲ್ಲಿರುವ ಆಭರಣಗಳು, ಕೀಲಿಕೈಗಳು, ಹೇರ್‌ಪಿನ್‌ಗಳು ಇತ್ಯಾದಿಗಳನ್ನೆಲ್ಲ  ಹೊರಗಿಟ್ಟೇ ಬರಬೇಕು ಎಂದು ಸೂಚಿಸ ಲಾಗುತ್ತದೆ.

Advertisement

ಇನ್ನು ಪೇಸ್‌ಮೇಕರ್‌ಗಳು, ನ್ಯೂರೋಸ್ಟಿಮ್ಯುಲೇಟರ್‌ಗಳು, ಇನ್ಸುಲಿನ್‌ ಪಂಪ್‌ಗ್ಳಂಥ ಎಲೆಕ್ಟ್ರಾನಿಕ್‌ ಸಾಧನಗಳು ಕಾಂತಕ್ಷೇತ್ರಕ್ಕೆ ತೆರೆದುಕೊಂಡರೆ ಅವುಗಳೂ ಹಾನಿಗೊಳಗಾಗುತ್ತವೆ. ಆಕ್ಸಿಜನ್‌ ಟ್ಯಾಂಕ್‌, ನಿರ್ಮಾಣ ಪರಿಕರಗಳು ಅತೀ ಹೆಚ್ಚು ಕಾಂತೀಯಶಕ್ತಿ ಹೊಂದಿರುವ ಕಾರಣ, ಅವುಗಳನ್ನು ಸ್ಕ್ಯಾನ್‌ ಕೊಠಡಿಯೊಳಗೆ ತರಲೇಬಾರದು. ಕ್ರೆಡಿಟ್‌ ಕಾರ್ಡ್‌ಗಳಲ್ಲಿರುವಂಥ ಮ್ಯಾಗ್ನೆಟಿಕ್‌ ಸ್ಟ್ರಿಪ್‌ಗ್ಳನ್ನೂ ಅಳಿಸಿಹಾಕುವ ಸಾಮರ್ಥ್ಯ ಈ ಕಾಂತಕ್ಷೇತ್ರಕ್ಕಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next