Advertisement

ಕೇರಳದ ವ್ಯಕ್ತಿಗೆ ಮಂಕಿಪಾಕ್ಸ್‌ ದೃಢ: 35 ಸಹಪ್ರಯಾಣಿಕರು ಐಸೊಲೇಶನ್‌ಗೆ

12:08 AM Jul 19, 2022 | Team Udayavani |

ಮಂಗಳೂರು: ಕೇರಳದಲ್ಲಿ ಎರಡನೇ ಮಂಕಿಪಾಕ್ಸ್‌ ಸೋಂಕು ಪ್ರಕರಣ ದೃಢಪಟ್ಟಿದೆ. ಈ ವ್ಯಕ್ತಿ ಮಂಗಳೂರು ವಿಮಾನ ನಿಲ್ದಾಣ ಮೂಲಕ ಆಗಮಿಸಿರುವ ಕಾರಣ ಕರಾವಳಿ ಜಿಲ್ಲೆಗಳಲ್ಲಿನ ಒಟ್ಟು 35 ಮಂದಿ ಸಹಪ್ರಯಾಣಿಕರನ್ನು ಐಸೊಲೇಶನ್‌ನಲ್ಲಿ ಇರಿಸಲಾಗಿದೆ.

Advertisement

ಜು.16ರಂದು ಯುಎಇನಿಂದ ವಿಮಾನ ಮೂಲಕ ಆಗಮಿಸಿದ್ದ 35ರ ಹರೆಯದ ಯುವಕ ಕಣ್ಣೂರಿಗೆ ತೆರಳಿದ್ದ. ಯುವಕನಲ್ಲಿ ಮಂಕಿಪಾಕ್ಸ್‌ ಲಕ್ಷಣ ಕಂಡು ಬಂದ ಕಾರಣ ಸ್ವತಃ ಅತನೇ ಬಂದು ಆಸ್ಪತ್ರೆಗೆ ದಾಖಲಾಗಿದ್ದ. ಆತನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ಸೋಮವಾರ ಆತನಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.

ಆ ಹಿನ್ನೆಲೆಯಲ್ಲಿ ವಿಮಾನದಲ್ಲಿ ಆಗಮಿಸಿದ್ದ ಪ್ರಯಾಣಿಕರಲ್ಲಿ ಆತನ ಮುಂದಿನ ಮೂರು ಹಾಗೂ ಹಿಂದಿನ ಮೂರು ಸಾಲಿನ ಆಸನಗಳಲ್ಲಿ ಕುಳಿತಿದ್ದ ಎಲ್ಲ ಪ್ರಯಾಣಿಕರನ್ನೂ ಗುರುತಿಸಿ ಸಂಪರ್ಕಿಸಲಾಗಿದೆ. ಅವರೆಲ್ಲರನ್ನು ಐಸೊಲೇ ಶನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಅವರಿಗೆ ಇದುವರೆಗೆ ಯಾವುದೇ ಮಂಕಿಪಾಕ್ಸ್‌ ಲಕ್ಷಣಗಳಿಲ್ಲ ಎಂದು ಜಿಲ್ಲಾ ಕೋವಿಡ್‌ ನೋಡಲ್‌ ಅಧಿಕಾರಿ ಡಾ| ಅಶೋಕ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಪ್ರಯಾಣಿಕರಲ್ಲಿ ಕಾಸರಗೋಡಿನ 15, ದ.ಕ. ಜಿಲ್ಲೆಯ 10 ಹಾಗೂ ಉಡುಪಿ ಜಿಲ್ಲೆಯ 8 ಮಂದಿ ಸೇರಿದ್ದಾರೆ. ಜು.13ರಂದು ಆಗಮಿಸಿದ್ದ ಇವರೆಲ್ಲರೂ 21 ದಿನಗಳ ಐಸೊಲೇಶನ್‌ನಲ್ಲಿ ಇರಬೇಕಾಗುತ್ತದೆ. ಅದುವರೆಗೆ ಕೋವಿಡ್‌ ರೀತಿಯಲ್ಲಿಯೇ ಸಂಯಮ ವಹಿಸಬೇಕಾಗುತ್ತದೆ. ಆಯಾ ಜಿಲ್ಲೆಗಳಿಗೆ ಸಂಬಂಧಿಸಿ ಪ್ರಯಾಣಿಕರ ಮೇಲೆ ಆಯಾ ಸರಕಾರಿ ವೈದ್ಯಾಧಿಕಾರಿಗಳು ನಿಗಾ ಇರಿಸಲಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಮಂಕಿಪಾಕ್ಸ್‌ ಪಾಸಿಟಿವ್‌ ವ್ಯಕ್ತಿಯ ಇಮಿಗ್ರೇಶನ್‌ ಪ್ರಕ್ರಿಯೆ ನೆರವೇರಿಸಿದ ಅಧಿಕಾರಿ ಹಾಗೂ ವಿಮಾನದಲ್ಲಿನ ಓರ್ವ ಫ್ಲೆಟ್‌ ಅಟೆಂಡೆಂಟ್‌ ಅವರನ್ನು ಕೂಡ ಮುನ್ನೆಚ್ಚರಿಕೆ ದೃಷ್ಟಿಯಿಂದ ಐಸೊಲೇಶನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ. ವಿಮಾನದಲ್ಲಿ ಒಟ್ಟು 191 ಮಂದಿ ಪ್ರಯಾಣಿಕರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next