ತಿರುವನಂತಪುರಂ: ಕೇರಳದ ರಸ್ತೆಗಳಲ್ಲಿ ಅಳವಡಿಸಲಾಗಿರುವ ರಸ್ತೆ ಸುರಕ್ಷತಾ ಕೆಮರಾದಿಂದಾಗಿ ಹೆಲ್ಮೆಟ್ ಧರಿಸದೆ ಪ್ರೇಯಸಿಯೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸಿದ ವಿವಾಹಿತ ವ್ಯಕ್ತಿಗೆ ಸಂಕಷ್ಟವನ್ನು ತಂದೊಡ್ಡಿದೆ.
ವ್ಯಕ್ತಿಯಿಂದ ಸಂಚಾರ ನಿಯಮ ಉಲ್ಲಂಘನೆಯ ವಿವರಗಳು, ಅತ್ಯಾಧುನಿಕ ಕೆಮರಾಗಳಿಂದ ತೆಗೆದ ಫೋಟೋಗಳು ಮತ್ತು ಮೋಟಾರು ವಾಹನ ಇಲಾಖೆ ಕಳುಹಿಸಿರುವ ವಿವರಗಳು ಕುಟುಂಬದಲ್ಲಿ ಸಮಸ್ಯೆಗಳನ್ನು ಉಂಟುಮಾಡಿವೆ. ಅಂತಿಮವಾಗಿ ಪೊಲೀಸ್ ಪ್ರಕರಣ ಮತ್ತು ವ್ಯಕ್ತಿಯ ಬಂಧನಕ್ಕೆ ಕಾರಣವಾಗಿದೆ.
ಇಡುಕ್ಕಿ ಮೂಲದ ವ್ಯಕ್ತಿ, ಎ 25 ರಂದು ಹೆಲ್ಮೆಟ್ ಧರಿಸದೆ ನಗರದ ರಸ್ತೆಗಳಲ್ಲಿ ತನ್ನ ಪ್ರೇಯಸಿಯೊಂದಿಗೆ ಸ್ಕೂಟರ್‌ನಲ್ಲಿ ಜಾಲಿಯಾಗಿ ಸವಾರಿ ಮಾಡಿದ್ದ.ವಾಹನದ ನೋಂದಣಿ ಪ್ರಮಾಣ ಪತ್ರದ ಪ್ರಕಾರ ಪತ್ನಿಯೇ ವಾಹನದ ಮಾಲಕಿಯಾಗಿರುವುದರಿಂದ ಪುರುಷನಿಂದ ಆದ ಉಲ್ಲಂಘನೆಯ ವಿವರ ಹಾಗೂ ಪಾವತಿಸಬೇಕಾದ ದಂಡದ ವಿವರವನ್ನು ಆಕೆಯ ಮೊಬೈಲ್ ಫೋನ್‌ಗೆ ಸಂದೇಶ ಬಂದಿದೆ.
ಸಂದೇಶವನ್ನು ಸ್ವೀಕರಿಸಿದಾಗ, ಫೋಟೋದಲ್ಲಿ ಕಾಣುವ ಮಹಿಳಾ ಹಿಂಬದಿ ಸವಾರೆ ಯಾರು ಎಂದು ಪತ್ನಿ ಪತಿಯನ್ನು ಪ್ರಶ್ನಿಸಿದ್ದಾಳೆ. ಜವಳಿ ಅಂಗಡಿಯೊಂದರ ಉದ್ಯೋಗಿಯಾಗಿರುವ 32 ವರ್ಷದ ವ್ಯಕ್ತಿ, ತನಗೂ ಆ ಮಹಿಳೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಕೂಟರ್‌ನಲ್ಲಿ ಲಿಫ್ಟ್ ಕೊಟ್ಟಿದ್ದಾಗಿ ಹೇಳಿಕೊಂಡರೂ ಪತ್ನಿ ನಂಬಲಿಲ್ಲ. ಇದು ದಂಪತಿ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಮೇ 5 ರಂದು ಕರಮಾನ ಪೊಲೀಸರಿಗೆ ದೂರು ನೀಡಿದ್ದು, ಪತಿ ತನ್ನ ಮತ್ತು ಅವರ ಮೂರು ವರ್ಷದ ಮಗುವನ್ನು ಅಮಾನುಷವಾಗಿ ನಡೆಸಿದ್ದಾನೆ ಎಂದು ಆರೋಪಿಸಿದ್ದಾಳೆ.
ಆಕೆಯ ಹೇಳಿಕೆ ಆಧರಿಸಿ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಸ್ತೆ ಸುರಕ್ಷತಾ ಯೋಜನೆಯ ‘ಸೇಫ್ ಕೇರಳ’ ಭಾಗವಾಗಿ ರಾಜ್ಯದ ರಸ್ತೆಗಳಲ್ಲಿ ಕೆಮರಾಗಳನ್ನು ಅಳವಡಿಸುವ ಕುರಿತು ತೀವ್ರ ರಾಜಕೀಯ ಗದ್ದಲಕ್ಕೆ ಸಾಕ್ಷಿಯಾಗಿದೆ.
ಕೆಮರಾಗಳ ಅಳವಡಿಕೆಗೆ ಸಂಬಂಧಿಸಿದ ಒಪ್ಪಂದಗಳ ಕುರಿತು ಎಲ್‌ಡಿಎಫ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದೆ.