ಪಶ್ಚಿಮ ಬಂಗಾಳ : ಶಾಲೆಯಲ್ಲಿ ಮಕ್ಕಳಿಗೆ ಅಧ್ಯಾಪಕರು ಪಾಠ ಮಾಡುತ್ತಿದ್ದ ವೇಳೆ ಬಂದೂಕುದಾರಿ ವ್ಯಕ್ತಿಯೊಬ್ಬ ತರಗತಿಯೊಳಗೆ ಅಕ್ರಮ ಪ್ರವೇಶಿಸಿದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಏಕಾಏಕಿ ತರಗತಿಯೊಳಗೆ ನುಗ್ಗಿದ ಬಂದೂಕುದಾರಿ ವ್ಯಕ್ತಿ ಮಕ್ಕಳಿಗೆ ಬಂಧೂಕಿನಿಂದ ಗುಂಡು ಹಾರಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ.
ತರಗತಿಯೊಳಗೆ ಬಂಧೂಕುಧಾರಿ ಪ್ರವೇಶಿಸಿದ ವಿಚಾರ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ, ಕೂಡಲೇ ಪೊಲೀಸರ ತಂಡ ಶಾಲೆಯತ್ತ ಧಾವಿಸಿ ಶಾಲೆಯೊಳಗೆ ಬಂದೂಕು ಹಿಡಿದು ನಿಂತ್ತಿದ್ದ ವ್ಯಕ್ತಿಯನ್ನು ಸೆದೆಬಡೆದು ತರಗತಿಯಲ್ಲಿ ಬಂಧಿಯಾಗಿದ್ದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಆತನ ಬಳಿಯಿದ್ದ ಬಂದೂಕು, ಒಂದು ಚಾಕು. ಎರಡು ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ದ್ರವರೂಪದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರ ಸಮಯಪ್ರಜ್ಞೆಯಿಂದ ನಡೆಯಬಹುದಾಗಿದ್ದ ಅಪಾಯ ತಪ್ಪಿದಂತಾಗಿದೆ.
ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಿಸಿದಾಗ ತನ್ನ ಪತ್ನಿ ತನ್ನ ಮಗನನ್ನು ಕರೆದುಕೊಂಡು ತವರು ಮನೆಗೆ ಹೋಗಿರುವುದಾಗಿ ಹೇಳಿಕೊಂಡಿದ್ದಾನೆ ಇದೆ ವಿಚಾರವಾಗಿ ಮನನೊಂದು ಈ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ಬಳಿಕ ಘಟನೆಯ ಸತ್ಯಾಸತ್ಯತೆ ತಿಳಿದುಬರಬೇಕಿದೆ ಎಂದಿದ್ದಾರೆ ಪೊಲೀಸರು.
ಸಿಎಂ ಶ್ಲಾಘನೆ
ತರಗತಿಯಲ್ಲಿ ಬಂಧಿಯಾಗಿದ್ದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ ಪೊಲೀಸರ ಕಾರ್ಯಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.