ಮಹಾರಾಷ್ಟ್ರ:ಪುಣೆಯ ಚಿನ್ನದ ವ್ಯಾಪಾರಿಯೊಬ್ಬರು “ನಾಲ್ಕು ಕೆಜಿ ಮ್ಯಾಜಿಕ್ ಮರಳು” ಖರೀದಿಸುವ ಮೂಲಕ ವ್ಯಕ್ತಿಯೊಬ್ಬ 50 ಲಕ್ಷ ರೂಪಾಯಿ ವಂಚಿಸಿರುವುದಾಗಿ ವರದಿ ತಿಳಿಸಿದೆ. ಇದೊಂದು ಬಂಗಾಳದಲ್ಲಿ ದೊರೆತ ಅಪರೂಪದ ಮರಳು ಎಂದು ಹೇಳಿ ಚಿನ್ನದ ವ್ಯಾಪಾರಿಯನ್ನು ನಂಬಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ದೇಶದ ಭದ್ರತಾ ವಿಚಾರ ಸೋರಿಕೆಯಾಗಿರುವುದು ಖಂಡನೀಯ: ಪ್ರಕಾಶ್ ರಾಠೋಡ್
ಏನಿದು ವಂಚನೆ ಘಟನೆ?
ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ಪುಣೆಯ ಹದಾಸ್ ಪುರ್ ಚಿನ್ನದ ವ್ಯಾಪಾರಿ ನೀಡಿರುವ ದೂರಿನ ಪ್ರಕಾರ, ಸುಮಾರು ಒಂದು ವರ್ಷದಿಂದ ಪರಿಚಿತನಾಗಿದ್ದ ಆರೋಪಿ ಜ್ಯುವೆಲ್ಲರಿ ಶಾಪ್ ಗೆ ಭೇಟಿ ನೀಡುತ್ತಿದ್ದ. ಹೀಗೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ದಿನ ಕಳೆದಂತೆ ಈ ವ್ಯಕ್ತಿ ಚಿನ್ನದ ವ್ಯಾಪಾರಿಯ ಕುಟುಂಬಕ್ಕೂ ಆಪ್ತನಾಗಿದ್ದ. ನಂತರ ಅವರಿಗೆ ಡೈರಿ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ.
ಇತ್ತೀಚೆಗೆ 4 ಕೆಜಿ ಮರಳು ತುಂಬಿದ್ದ ಚೀಲವನ್ನು ತಂದು ಕೊಟ್ಟು, ಇದನ್ನು ತಾನು ಬಂಗಾಳದಿಂದ ತಂದಿದ್ದು, ಈ ವಿಶೇಷವಾದ ಮರಳನ್ನು ವಿಪರೀತವಾಗಿ ಕಾಯಿಸಿದಾಗ ಚಿನ್ನವಾಗಿ ಮಾರ್ಪಾಡಾಗುತ್ತದೆ ಎಂದು ತಿಳಿಸಿದ್ದ. ಇದನ್ನು ನಂಬಿದ ಚಿನ್ನದ ವ್ಯಾಪಾರಿ 30 ಲಕ್ಷ ರೂಪಾಯಿ ನಗದು ಹಾಗೂ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ನೀಡಿರುವುದಾಗಿ ತಿಳಿಸಿದ್ದಾರೆ.
ಕೊನೆಗೂ ಮರಳಿನಿಂದ ಚಿನ್ನ ಪಡೆಯುವ ಆಸೆಯಿಂದ ವ್ಯಾಪಾರಿ ಮರಳನ್ನು ಬೆಂಕಿಯಿಂದ ಕಾಯಿಸಿದ್ದ. ಆದರೆ ಮರಳು ಬಿಸಿಯಾಯ್ತೇ ವಿನಃ, ಚಿನ್ನವಾಗಿ ಪರಿವರ್ತನೆಯಾಗಿಲ್ಲ. ಆಗ ತಾನು ಮೋಸ ಹೋಗಿರುವುದಾಗಿ ಚಿನ್ನದ ವ್ಯಾಪಾರಿಗೆ ಮನವರಿಕೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 420(ಮೋಸ, ವಂಚನೆ), 406 (ವಿಶ್ವಾಸದ್ರೋಹ), 34ರ ಪ್ರಕಾರ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.