ಚೆನ್ನೈ: ಮನೆಯೊಳಗೆ ಮಲಗಲು ಅವಕಾಶ ಕೊಡುವುದಿಲ್ಲ ಎಂದ ತಂದೆಯ ಮೈಮೇಲೆ ಕಟುಕ ಮಗ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿದ ಹೃದಯವಿದ್ರಾವಕ ಘಟನೆ ತಮಿಳುನಾಡಿನ ರೋಯಪೆಟ್ಟಾದಲ್ಲಿ ನಡೆದಿದೆ.
ಏನಿದು ಘಟನೆ:
ತಮಿಳುನಾಡಿನ ರೋಯಪೆಟ್ಟಾದಲ್ಲಿರುವ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಇ ಶಂಕರ್ ಹಾಗೂ ಮೂವರು ಮಕ್ಕಳ ನಡುವೆ ಜಗಳ ಆರಂಭವಾಗಿತ್ತು. ಅದಕ್ಕೆ ಕಾರಣವಾಗಿದ್ದು, ಒಬ್ಬ ಮಗನಿಗೆ ಮನೆಯಲ್ಲಿ ಇರಲು ಅವಕಾಶ ಕೊಡುವುದಿಲ್ಲ ಎಂಬುದು!
ಶಂಕರ್ ಗೆ ರಾಮಚಂದ್ರನ್(29ವರ್ಷ), ರಾಮಕೃಷ್ಣನ್(28ವರ್ಷ) ಹಾಗೂ ವಿಜಯ್(26ವರ್ಷ) ಸೇರಿ ಮೂವರು ಗಂಡು ಮಕ್ಕಳು. ಶುಕ್ರವಾರ ತಂದೆ ಶಂಕರ್ ಮತ್ತು ಮಗ ರಾಮಕೃಷ್ಣನ ನಡುವೆ ಜಗಳವಾಗಿತ್ತು. ಕುಡಿತದ ಅಭ್ಯಾಸ ಹೊಂದಿರುವ ನಿನಗೆ ನನ್ನ ಮನೆಯೊಳಗೆ ಪ್ರವೇಶ ಇಲ್ಲ ಎಂದು ತಂದೆ ಹೇಳಿದ್ದೇ ಜಗಳಕ್ಕೆ ಕಾರಣವಾಗಿತ್ತು.
ಗಲಾಟೆ ಕೇಳಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಝಾಮ್ ಬಜಾರ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಶಂಕರ್ ಹಾಗೂ ರಾಮಕೃಷ್ಣನ್ ನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ, ಬುದ್ದಿವಾದ ಹೇಳಿ ಶುಕ್ರವಾರ ರಾತ್ರಿ ವಾಪಸ್ ಕಳುಹಿಸಿದ್ದರು.
ರಾತ್ರಿ ಶಂಕರ್ ಅವರ ಕಿರಿಯ ಮಗ ವಿಜಯ್ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದರೆ, ತಂದೆ ಶಂಕರ್ ಕೆಳ ಅಂತಸ್ತಿನಲ್ಲಿ ಮಲಗಿದ್ದರೆ, ರಾಮಕೃಷ್ಣನ್ ಮನೆಯ ಹೊರಗೆ ಮಲಗಿದ್ದ. ಸುಮಾರು 1.30ರ ಮುಂಜಾನೆ ಹೊತ್ತಿಗೆ ತಂದೆ ಕೂಗಿಕೊಳ್ಳುತ್ತಿರುವ ಶಬ್ದ ಕೇಳಿ ವಿಜಯ್ ಕೆಳಗೆ ಓಡಿ ಬಂದಿದ್ದ. ಆಗ ಬೆಂಕಿಯಲ್ಲಿ ತಂದೆ ಸುಟ್ಟು ಕರಕಲಾಗಿದ್ದರು ಎಂದು ವರದಿ ತಿಳಿಸಿದೆ. ಶೇ.95ರಷ್ಟು ಸುಟ್ಟು ಹೋಗಿದ್ದ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಸ್ಪಂದಿಸದೆ ಸಾವಿಗೀಡಾಗಿದ್ದರು.
2ನೇ ಪುತ್ರ ರಾಮಕೃಷ್ಣನ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ. ತಾನೇ ಪೆಟ್ರೋಲ್ ಖರೀದಿಸಿ ತಂದು ಕಿಟಕಿ ಮೂಲಕ ತಂದೆ ಮೈಮೇಲೆ ಸುರಿದು ಬೆಂಕಿ ಹಚ್ಚಿರುವುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.