ಚೆನ್ನೈ: ಬೆಕ್ಕಿನ ಮರಿಗಳಿಗೆ ಹುಲಿಯ ಬಣ್ಣ ಬಳಿದು, ಹುಲಿ ಮರಿಗಳು ಮಾರಾಟಕ್ಕಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ವೆಲ್ಲೂರುನಲ್ಲಿ ನಡೆದಿದೆ.
ತಿರುವಣ್ಣಾಮಲೈ ಮೂಲದ ಪಾರ್ಥಿಪನ್ (24) ರವಿವಾರ, 3 ತಿಂಗಳ ಹುಲಿಯ ಮರಿಗಳು ಮಾರಾಟಕ್ಕಿವೆ, 25 ಲಕ್ಷ ರೂ. ಯಾರಿಗಾದರೂ ಬೇಕಾದರೆ ತಿಳಿಸಿ, 10 ದಿನಗಳ ಒಳಗೆ ನಿಮ್ಮ ವಿಳಾಸಕ್ಕೆ ಹುಲಿ ಮರಿಗಳನ್ನು ತಲುಪಿಸಲಾಗುವುದು ಎಂದು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದರು.
ಈ ವಿಷಯ ಅರಣ್ಯಾಧಿಕಾರಿಗಳಿಗೆ ತಲುಪಿದ್ದು, ಕೂಡಲೇ ಸ್ಟೇಟಸ್ ಹಾಕಿದವನನ್ನು ಹುಡುಕಲು ಆರಂಭಿಸಿದ್ದಾರೆ. ಇದನ್ನು ತಿಳಿದ ಪಾರ್ಥಿಬನ್ ಪರಾರಿ ಆಗಲು ಯತ್ನಿಸಿದ್ದಾನೆ. ಕೊನೆಗೂ ಅರಣ್ಯಾಧಿಕಾರಿಗಳು ವೆಲ್ಲೂರುನಲ್ಲಿ ಆತನನ್ನು ಬಂಧಿಸಿದ್ದಾರೆ.
ಬಂಧಿಸಿದ ಬಳಿಕ, ಪಾರ್ಥಿಪನ್ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅಲ್ಲಿ ಯಾವ ಹುಲಿ ಮರಿಗಳು ಇರಲಿಲ್ಲ. ಆ ನಂತರ ವಿಚಾರಣೆ ನಡೆಸಿದಾಗ, ಬೆಕ್ಕಿನ ಮರಿಗಳಿಗೆ ಹುಲಿಯ ಬಣ್ಣ ಬಳಿದು ಅವುಗಳನ್ನು ಮಾರಾಟ ಮಾಡಲು ಯತ್ನಿಸಿದ್ದಾನೆ ಎನ್ನುವ ವಿಷಯ ಬೆಳಕಿಗೆ ಬಂದಿದೆ.
ವರದಿಯ ಪ್ರಕಾರ ಅಂಬತ್ತೂರಿನ ಸ್ನೇಹಿತ ತಮಿಜ್ ಈ ರೀತಿ ಮಾಡುವ ಯೋಜನೆಯನ್ನು ಕೊಟ್ಟಿದ್ದ,ಆತನೇ ಈ ಫೋಟೋವನ್ನು ಪಾರ್ಥಿಬನ್ ಗೆ ನೀಡಿದ್ದ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ತಮಿಜ್ ನನ್ನು ಕೂಡ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.