ಬೆಂಗಳೂರು: ಪತ್ನಿಯ ಶೀಲ ಶಂಕಿಸಿದ ಪತಿಯು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾವೇರಿಪುರದ 13ನೇ ಅಡ್ಡರಸ್ತೆಯ ನಿವಾಸಿ ವನಜಾಕ್ಷಿ (31) ಕೊಲೆಯಾದ ಮಹಿಳೆ.
ಈಕೆ ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದು, ಪತಿ ಅಶೋಕ್ ಕಾರು ಚಾಲಕನಾಗಿದ್ದಾನೆ. ಏ.17ರಂದು ಪತ್ನಿ ಮೊಬೈಲ್‌ನಲ್ಲಿ ಮಾತನಾಡುವ ವಿಚಾರಕ್ಕೆ ಜಗಳವಾಗಿದ್ದು, ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ ಅಶೋಕ್, ಮನೆಗೆ ಹೊರಗಡೆಯಿಂದ ಬೀಗ ಹಾಕಿಕೊಂಡು ಪರಾರಿಯಾಗಿದ್ದ. ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಹುಲಿಯೂರು ದುರ್ಗದ ಕೆಂಚಾಲಹಳ್ಳಿ ನಿವಾಸಿಯಾಗಿರುವ ಅಶೋಕ್ ಹಾಗೂ ವನಜಾಕ್ಷಿ 13 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಶಾಲೆಗೆ ರಜೆ ಇರುವುದರಿಂದ ಮಕ್ಕಳನ್ನು ಊರಿಗೆ ಕಳುಹಿಸಿದ್ದರು. ಕೊಲೆಯಾದ ಸಂಜೆ ಅಶೋಕ್ ಕ್ಯಾಬ್ ಚಾಲನೆ ವೃತ್ತಿ ಮುಗಿಸಿಕೊಂಡು ಬಂದಾಗ ಪತ್ನಿ ವನಜಾಕ್ಷಿ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆತ, “ಯಾರ ಜತೆ ಮಾತನಾಡುತ್ತಿದ್ದೀಯಾ? ಯಾವಾಗಲೂ ಫೋನ್‌ನಲ್ಲಿಯೇ ಬ್ಯುಸಿ ಇರ್ತಿಯಾ’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ವನಜಾಕ್ಷಿ ಕೂಡ, “ನಾನು ಯಾರ ಜತೆ ಬೇಕಾದರೂ ಮಾತನಾಡುತ್ತೇನೆ’ ಎಂದು ಎದುರು ಉತ್ತರ ನೀಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಜಗಳ ನಡೆದಿತ್ತು. ಈ ವೇಳೆ ಕೋಪದಲ್ಲಿ ಅಶೋಕ್ ವನಜಾಕ್ಷಿಯ ಕತ್ತು ಹಿಸುಕಿ ಕೊಲೆ ಮಾಡಿ ಆಕೆಯ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಬಳಿಕ ವನಜಾಕ್ಷಿಯ ಮೃತದೇಹವನ್ನು ಮನೆಯ ಒಳಗಡೆ ಬಿಟ್ಟು, ಮನೆ ಹೊರಗಿನಿಂದ ಬೀಗ ಹಾಕಿಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕುಡಿದ ಅಮಲಿನಲ್ಲಿ ಬಿದ್ದು ಯುವಕ ಸಾವು: ಕೊಲೆ ಎಂದು ದೂರು ನೀಡಿದ ದಾರಿಹೋಕರು
ವನಜಾಕ್ಷಿ ಸಹೋದರ ಕಳೆದ 3 ದಿನಗಳಿಂದ ಆಕೆಯ ಮೊಬೈಲ್ ನಂಬರ್‌ಗೆ ಕರೆ ಮಾಡಿದರೂ ಸ್ವಿಚ್ಡ್ ಆಫ್ ಬಂದಿದೆ. ಅಶೋಕ್ ನಂಬರ್ ಕೂಡ ಸ್ವಿಚ್ಡ್ ಆಫ್ ಆಗಿದ್ದರಿಂದ ಅನುಮಾನಗೊಂಡು ಬುಧವಾರ ರಾತ್ರಿ ಮನೆಯ ಹತ್ತಿರ ಹೋಗಿ ನೋಡಿದಾಗ ಬೀಗ ಹಾಕಿರುವುದು ಕಂಡು ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.