ಬಜಪೆ: ಮಂಗಳೂರು ತಾಲೂಕು ಮೂಳೂರು ಗ್ರಾಮದ ಬಂಗ್ಲೆಗುಡ್ಡೆ ಸೈಟ್ ಬದಿಯ ರಸ್ತೆಯ ಬದಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಆ. 3ರಂದು ಬಜಪೆ ಪೊಲೀಸರು ದಾಳಿ ನಡೆಸಿ ಸೊತ್ತು ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
ಮೂಳೂರು ಗ್ರಾಮ ಮಠದ ಗುಡ್ಡೆ ಹೌಸ್ ನೀರಿನ ಟ್ಯಾಂಕ್ ಬಳಿಯ ನಿವಾಸಿ ನವಾಜ್ (30) ಬಂಧಿತ ಆರೋಪಿ.
ಆತ ಕೇರಳದ ಉಪ್ಪಳ ಕಡೆಯಿಂದ ಕಡಿಮೆ ಬೆಲೆಗೆ ಗಾಂಜಾವನ್ನು ಖರೀದಿಸಿ ಅದನ್ನು ಆ. 3ರಂದು ಬೈಕಿನಲ್ಲಿ ಇರಿಸಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದುದು ತನಿಖೆಯಲ್ಲಿ ಗೊತ್ತಾಗಿದೆ.
ಆತನಲ್ಲಿದ್ದ ಬೈಕ್, ಸುಮಾರು 430 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇದಲ್ಲದೆ ಆತನ ಪ್ಯಾಂಟಿನ ಜೇಬಿನಲ್ಲಿದ್ದ 17 ಪಾರದರ್ಶಕ ಚಿಕ್ಕ ಪ್ಲಾಸ್ಟಿಕ್ ತೊಟ್ಟೆಗಳು, ಚಿಕ್ಕ ಬ್ಯಾಟರಿ ಚಾಲಿತ ತೂಕ ಮಾಪಕ, ಸ್ಯಾಮ್ ಸಾಂಗ್ ಮೊಬೈಲ್ ಫೋನ್‌ಗಳನ್ನು ವಶಪಡಿಸಲಾಗಿದೆ
ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯನ್ನು ತಡೆಗಟ್ಟುವಲ್ಲಿ ವಿಶೇಷ ಕಾರ್ಯಚರಣೆ ನಡೆಸುವಂತೆ ಮಂಗಳೂರು ನಗರದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರ ಮಾರ್ಗದರ್ಶನದಂತೆ, ಡಿಸಿಪಿ ಯವರಾದ ಅಂಶುಕುಮಾರ್ ಮತ್ತು ದಿನೇಶ್ ಕುಮಾರ್ ಅವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ ಮತ್ತು ಪೊಲೀಸ್ ನಿರೀಕ್ಷಕ ಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರುಗಳು ಹಾಗೂ ಅಪರಾಧ ಪತ್ತೆ ವಿಭಾಗದ ಸಿಬಂದಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.