ಮಹಾರಾಷ್ಟ್ರ: ಪೊಲೀಸ್ ಅಧಿಕಾರಿಯಂತೆ ಪೋಸ್ ಕೊಟ್ಟು ಪತ್ರಕರ್ತೆಯಿಂದ ಹಣ ವಸೂಲಿ ಮಾಡಲು ಯತ್ನಿಸಿದ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಮಹಾರಾಷ್ಟ್ರದ ಸರ್ದಾರ್ ತಾರಾಸಿಂಗ್ ತಲಾವ್ ಬಳಿಯ ಪೂರ್ವ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ (ಜ.9 ರಂದು)ನಡೆದಿದೆ.
ಮಹಿಳಾ ಪತ್ರಕರ್ತೆ ಹಾಗೂ ಆಕೆಯ ಪತಿ ಕಾರಿನಲ್ಲಿ ಕುಳಿತಿದ್ದ ವೇಳೆ ವ್ಯಕ್ತಿಯೊಬ್ಬ ಬಂದು ಕಾರಿನ ಫೋಟೋ ತೆಗೆದಿದ್ದಾನೆ. ಏಕಾಏಕಿ ಈ ರೀತಿ ಯಾರೋ ಅಪರಿಚಿತ ವ್ಯಕ್ತಿ ಕಾರಿನ ಪೋಟೋ ತೆಗೆಯುವುದನ್ನು ನೋಡಿದ ಪತ್ರಕರ್ತೆ ಇದನ್ನು ಪ್ರಶ್ನಿಸಿದ ವೇಳೆ ತಾನು ಪೊಲೀಸ್ ಎಂದು ಹೇಳಿದ್ದಾನೆ.
ಪೊಲೀಸ್ ಐಡಿ ತೋರಿಸಲು ಹೇಳಿದಾಗ ಹಿರಿಯ ಅಧಿಕಾರಿಗೆ ಹೇಳುವುದಾಗಿ ಬೆದರಿಸಿದ್ದಾರೆ. ಕೂಡಲೇ ಮಹಿಳೆ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿ ಪೊಲೀಸ್ ಅಧಿಕಾರಿಯಲ್ಲ, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯೆಂದು ಸತ್ಯ ಬಾಯಿ ಬಿಟ್ಟಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.