ಕಾಸ್ ಗಂಜ್(ಉತ್ತರಪ್ರದೇಶ): ಉತ್ತರಪ್ರದೇಶ ಕಾಸ್ ಗಂಜ್ ನಲ್ಲಿ ಸಂಭವಿಸಿದ್ದ ಕೋಮುದಳ್ಳುರಿಗೆ ಚಂದನ್ ಗುಪ್ತಾ(22ವರ್ಷ) ಎಂಬ ಯುವಕ ಗುಂಡೇಟಿಗೆ ಬಲಿಯಾಗಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರ ನಡೆಸಿದ ಕಾರ್ಯಾಚರಣೆಯಲ್ಲಿ ಗಲಭೆಯ ಪ್ರಮುಖ ಆರೋಪಿಯನ್ನು ಬುಧವಾರ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಕಳೆದ ಶುಕ್ರವಾರ ಕೋಮುಗಲಭೆಯಲ್ಲಿ ಚಂದನ್ ಗುಪ್ತಾನನ್ನು ಗುಂಡಿಟ್ಟು ಕೊಂದಿದ್ದ ಕಾಸ್ ಗಂಜ್ ನ ಸಲೀಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕಾಸ್ ಗಂಜ್ ನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಸಲೀಂ ತನ್ನ ಮನೆಯ ಬಾಲ್ಕನಿಯಿಂದ ಗುಂಡಿನ ದಾಳಿ ನಡೆಸಿರುವುದಾಗಿ ಕೆಲವು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದರು. ಕಳೆದ 2 ದಿನಗಳಲ್ಲಿ ಪೊಲೀಸರು ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಚಂದನ್ ದೇಹ ಹೊಕ್ಕಿದ್ದ ಬುಲೆಟ್ ಗೂ, ವಶಪಡಿಸಿಕೊಂಡಿದ್ದ ಪಿಸ್ತೂಲಿನಲ್ಲಿದ್ದ ಬುಲೆಟ್ ಗೂ ಹೊಂದಾಣಿಯಾಗಿದ್ದು ಪತ್ತೆಯಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಆನಂದ್ ಕುಮಾರ್ ತಿಳಿಸಿದ್ದಾರೆ.
ಏತನ್ಮಧ್ಯೆ ಸಲೀಂ ಅಪರಾಧ ಹಿನ್ನೆಲೆ ಹೊಂದಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ. ಗಣರಾಜ್ಯೋತ್ಸವ ದಿನದಂದು ತಿರಂಗಾ ಯಾತ್ರೆ ನಡೆಯುತ್ತಿದ್ದ ವೇಳೆ ಚಂದನ್ ಗುಪ್ತಾನನ್ನು ತಡೆದು ರಾಷ್ಟ್ರಧ್ವಜವನ್ನು ಕಿತ್ತೆಸೆದಿದ್ದರು. ಬಳಿಕ ಗನ್ ಪಾಯಿಂಟ್ ಬೆದರಿಕೆಯಲ್ಲಿ ಪಾಕ್ ಪರ ಘೋಷಣೆ ಕೂಗುವಂತೆ ಒತ್ತಾಯಿಸಿದ್ದರು. ಆದರೆ ತನ್ನ ಮಗ ಘೋಷಣೆ ಕೂಗಲು ನಿರಾಕರಿಸಿದಾಗ ತಲೆಗೆ ಗುಂಡಿಟ್ಟು ಕೊಂದಿರುವುದಾಗಿ ಗುಪ್ತಾ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.