ಬೆಂಗಳೂರು: ಅನ್ಯ ಧರ್ಮದ ಸ್ನೇಹಿತನ ಜತೆಗೆ ಬುರ್ಖಾ ಧರಿಸಿ ತೆರಳುತ್ತಿದ್ದ ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವಕನನ್ನು ಬೆಂಗಳೂರು ಸೆನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ನಿವಾಸಿ ಜಾಕೀರ್ ಅಹ್ಮದ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೂರ್ವ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಯು ಜಾಕಿರ್ ಅಹ್ಮದ್ ವಿರುದ್ಧ ಔಪಚಾರಿಕವಾಗಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಪ್ರಕ್ರಿಯೆಗಳ ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ಬೈಕ್ ಅಡ್ಡಗಟ್ಟಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸಿದ್ದ. ಅನ್ಯ ಕೋಮಿನ ಯುವಕನೊಂದಿಗೆ ಪ್ರಯಾಣಿಸಿದ್ದಕ್ಕೆ ಮುಸ್ಲಿಂ ಯುವತಿಯನ್ನು ಆಕ್ಷೇಪಿಸಿ ಆತ ಬುರ್ಖಾ ತೆಗೆಯುವಂತೆ ಹೇಳಿದ್ದ.ಶನಿವಾರ ಸಾರ್ವಜನಿಕ ಸ್ಥಳದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಬೈಕ್ ಸವಾರ ಮತ್ತು ಮಹಿಳೆ ಪರಸ್ಪರ ಪರಿಚಿತರು ಎಂದು ತನಿಖೆಯಿಂದ ತಿಳಿದುಬಂದಿದೆ.
ಯುವತಿ ಮತ್ತು ಯುವಕ ಬೈಕಿನಲ್ಲಿ ಒಟ್ಟಿಗೆ ಸಂದರ್ಶನಕ್ಕೆ ಹಾಜರಾಗಿ ಹಿಂತಿರುಗುತ್ತಿದ್ದರು. ಅವಳ ಸ್ನೇಹಿತ ಅವಳನ್ನು ಮನೆಗೆ ವಾಪಸ್ಸು ಬಿಡುತ್ತಿದ್ದ.
ಆರೋಪಿ ಜಾಕೀರ್ ಅಹಮ್ಮದ್ ರಷ್ಯಾದಲ್ಲಿ ಮೆಡಿಕಲ್ ವಿದ್ಯಾರ್ಥಿಯಾಗಿದ್ದು, ಎರಡು ತಿಂಗಳ ರಜೆಯಲ್ಲಿ ಬೆಂಗಳೂರಿನ ಗೋವಿಂದಪುರದಲ್ಲಿ ನೆಲೆಸಿರುವ ತನ್ನ ಸಹೋದರಿಯರನ್ನು ಭೇಟಿ ಮಾಡಲು ಬಂದಿದ್ದ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಯಾವುದೇ ನೈತಿಕ ಪೊಲೀಸ್‌ಗಿರಿ ಪ್ರಕರಣಗಳು ನಡೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರಕಾರ ಎಚ್ಚರಿಕೆ ನೀಡಿದೆ. ತನಿಖೆ ಮುಂದುವರಿಸಲಾಗಿದೆ.