ಬೆಂಗಳೂರು: ಮದ್ಯದ ಅಮಲಿನಲ್ಲಿ ರಸ್ತೆ ಬದಿ ಮಲಗಿದ್ದ ವ್ಯಕ್ತಿಗಳ ಜತೆ ಹಣಕಾಸಿನ ವಿಚಾರಕ್ಕೆ ಜಗಳ ಮಾಡಿಕೊಂಡು, ಬಳಿಕ ಕಲ್ಲು ಎತ್ತಿ ಹಾಕಿ ಹತ್ಯೆ ಗೈಯುತ್ತಿದ್ದ ಸರಣಿ ಹಂತಕನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಬ್ರಹ್ಮಣ್ಯಪುರದ ವಸಂತಪುರ ಗುಡ್ಡೆ ನಿವಾಸಿ ಗಿರೀಶ್(26) ಬಂಧಿತ.
ಆರೋಪಿ ಮೇ 12ರಂದು ರಾತ್ರಿ ಜಯನಗರದ 7ನೇ ಹಂತದಲ್ಲಿ ರಸ್ತೆ ಬದಿ ಮಲಗಿದ್ದ ವ್ಯಕ್ತಿಗೆ ಬೀಡಿ ಮತ್ತು ಮದ್ಯ ಸೇವಿಸಲು ಹಣ ಕೇಳಿದ್ದಾನೆ. ಆತ ಕೊಡಲು ನಿರಾಕರಿಸಿದ್ದ. ಈ ಹಿಂದೆಯೂ ಆ ವ್ಯಕ್ತಿ ಆರೋಪಿಗೆ ಹಣ ಕೊಟ್ಟಿರಲಿಲ್ಲ. ಅದರಿಂದ ಕೋಪಗೊಂಡು ಪಕ್ಕದಲ್ಲೇ ಇದ್ದ ಕಲ್ಲು ಎತ್ತಿ ಹಾಕಿ ಹತ್ಯೆಗೈದು ಪರಾರಿಯಾಗಿದ್ದ. ಮತ್ತೂಂದೆಡೆ ಕೊಲೆಯಾದ ವ್ಯಕ್ತಿಯ ಗುರುತು ಇದು ವರೆಗೂ ಪತ್ತೆಯಾಗಿಲ್ಲ. ಘಟನಾ ಸ್ಥಳದ ಸುತ್ತ- ಮುತ್ತಲಿನ ಸಿಸಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿ ದಾಗ ಆರೋಪಿ ಗಿರೀಶ್ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಜತೆಗೆ ಈ ಹಿಂದಿನ ಕೆಲ ಪ್ರಕರಣಗಳ ಆರೋಪಿಗಳ ಪಟ್ಟಿಯಲ್ಲಿದ್ದ ಮುಖಚಹರೆಯನ್ನು ಹೋಲಿಕೆ ಮಾಡಿದಾಗ ಆರೋಪಿ ಸುಳಿವು ಸಿಕ್ಕಿತ್ತು. ಹೀಗಾಗಿ ಆತನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಕೊಲೆಯ ವಿಚಾರ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮತ್ತೊಂದು ಕೊಲೆ: ಮೇ 12ರಂದು ಅಪರಿಚಿತ ವ್ಯಕ್ತಿಯನ್ನು ಕೊಲೆಗೈದಿದ್ದ ಆರೋಪಿ ಗಿರೀಶ್, ಮೇ 18ರಂದು ಕೆ.ಆರ್.ಮಾರುಕಟ್ಟೆ ಠಾಣೆ ವ್ಯಾಪ್ತಿಯ ಸಿಟಿ ಮಾರ್ಕೆಟ್ ವಾಣಿಜ್ಯ ಸಂಕೀರ್ಣದ ಹಿಂದಿನ ಜಿ.ಪಿ.ಸ್ಟ್ರೀಟ್‌ನಲ್ಲಿ ಸುರೇಶ್(28) ಎಂಬಾತನ ಮೇಲೂ ಕಲ್ಲು ಎತ್ತಿ ಹಾಕಿ ಹತ್ಯೆಗೈದಿದ್ದ. ಮತ್ತೂಂದೆಡೆ ಗಿರೀಶ್ ಮತ್ತು ಸುರೇಶ್ ಸ್ನೇಹಿತ ರಾಗಿದ್ದು, ಒಟ್ಟಾಗಿ ಮೊಬೈಲ್ ಕದ್ದಿದ್ದರು. ಮೊಬೈಲ್ ಮಾರಾಟದಿಂದ ಬಂದ ಹಣ ಹಂಚಿ ಕೊಳ್ಳುವ ವಿಚಾರಕ್ಕೆ ಅವರ ನಡುವೆ ಜಗಳವಾಗಿತ್ತು. ಅದರಿಂದ ಕೋಪಗೊಂಡಿದ್ದ ಗಿರೀಶ್, ರಾತ್ರಿ ಮಲಗಿದ್ದ ಸುರೇಶ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಎಂಬುದು ಆತನ ವಿಚಾರಣೆಯಲ್ಲಿ ಗೊತ್ತಾಗಿದೆ.
ಮದ್ಯ ಮತ್ತು ಗಾಂಜಾ ಅಮಲಿನಲ್ಲಿ ಆರೋಪಿ ಈ ಎರಡೂ ಕೊಲೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಒಬ್ಬಂಟಿಯಾಗಿದ್ದ ಹಂತಕ ಹಲ್ಲೆ, ದರೋಡೆ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 10 ತಿಂಗಳು ಜೈಲು ಸೇರಿದ್ದ ಹಂತಕ ಗಿರೀಶ್, ಸ್ನೇಹಿತರ ಜತೆ ಸೇರಿ 2015ರಿಂದಲೇ ಅಪರಾಧ ಕೃತ್ಯಗಳನ್ನು ಎಸಗಿದ್ದ. ಆತನ ವಿರುದ್ಧ ಸುಬ್ರಹ್ಮಣ್ಯಪುರ, ಬನಶಂಕರಿ ಠಾಣೆಯಲ್ಲಿ ಹಲ್ಲೆ, ದರೋಡೆಗೆ ಸಂಚು, ಲೈಂಗಿಕ ದೌರ್ಜನ್ಯದ ಸಂಬಂಧ 4 ಪ್ರಕರಣ ದಾಖಲಾಗಿವೆ.
ಅಲ್ಲದೆ, ಹಲ್ಲೆ ಪ್ರಕರಣದಲ್ಲಿ ಬಂಧಿತನಾಗಿ 10 ತಿಂಗಳು ಜೈಲು ಶಿಕ್ಷೆ ಅನುಭವಿಸಿ 2020ರಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಆ ನಂತರವೂ ಅಪರಾಧ ಕೃತ್ಯ ಮುಂದುವರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು. ಇನ್ನು ಗಿರೀಶ್‌ನ ತಂದೆ 10 ವರ್ಷಗಳ ಹಿಂದೆ ಕುಟುಂಬ ಸದಸ್ಯರನ್ನು ತೊರೆದು 2ನೇ ಮದುವೆಯಾಗಿದ್ದಾರೆ. ಬಳಿಕ ಗಿರೀಶ್‌ನ ತಾಯಿ ಮತ್ತು ತಂಗಿ ವಸಂತಪುರದಲ್ಲಿನ ಮನೆ ಮಾರಿ ಕೇರಳದಲ್ಲಿ ವಾಸವಾಗಿದ್ದಾರೆ. ಒಬ್ಬಂಟಿಯಾಗಿದ್ದ ಗಿರೀಶ್, ಹೋಟೆಲ್ ಮತ್ತು ಸಿಟಿ ಮಾರ್ಕೆಟ್ ನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮದ್ಯವ್ಯಸನಿಯಾದ ಆತ ಸಿಟಿ ಮಾರ್ಕೆಟ್, ಮೆಜೆಸ್ಟಿಕ್, ರೈಲು ನಿಲ್ದಾಣದಲ್ಲಿ ಜನರ ಮೊಬೈಲ್, ಹಣ ದೋಚುತ್ತಿದ್ದ. ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಜನರನ್ನು ಬೆದರಿಸಿ ಹಣ, ಮೊಬೈಲ್ ದೋಚುತ್ತಿದ್ದ ಎಂದು ಪೊಲೀಸರು ಹೇಳಿದರು.