ಲಕ್ನೋ: ಕುರ್ಚಿ ಮೇಲೆ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ರಾಜಕಾರಣದಿಂದ ಹಿಡಿದು ಪ್ರತಿಯೊಂದು ಕ್ಷೇತ್ರದಲ್ಲೂ ಕುರ್ಚಿಗಾಗಿ ಕಸರತ್ತು ನಡೆಯುತ್ತಿರುತ್ತದೆ. ಹಾಗೆಯೇ ಉತ್ತರಪ್ರದೇಶ ಶಿಕ್ಷಣ ಸಚಿವರ ಕುರ್ಚಿಯ ಮೇಲೆ ಕುಳಿತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡ ಯುವಕ ಉತ್ತರಪ್ರದೇಶ ಪೊಲೀಸರ ಅತಿಥಿಯಾಗಿದ್ದಾನೆ!
ಏನಿದು ಕುರ್ಚಿ ಪ್ರಕರಣ?
ಬಾರಾಬಂಕಿಯ ಅಜಯ್ ತಿವಾರಿ ಎಂಬ ಯುವಕ ತನ್ನ ಗೆಳೆಯರ ಜೊತೆ ಉತ್ತರಪ್ರದೇಶ ಶಿಕ್ಷಣ ಸಚಿವ ಸಂದೀಪ್ ಸಿಂಗ್ ಅವರನ್ನು ಭೇಟಿಯಾಗಲು ತೆರಳಿದ್ದ. ಈ ಸಂದರ್ಭದಲ್ಲಿ ಸಚಿವರ ಕೊಠಡಿಯಲ್ಲಿ ಇರಲಿಲ್ಲವಾಗಿತ್ತು, ಗೆಳೆಯರು ಹೊರಗಿದ್ದರು, ಆಗ ತಾನೊಬ್ಬನೇ ಇರುವುದನ್ನು ಕಂಡು ಆತನಿಗೊಂದು ಹುಚ್ಚು ಆಸೆ ಮೊಳಕೆಯೊಡೆದಿತ್ತು… ಕೂಡಲೇ ಆತ ಸಚಿವರ ಕುರ್ಚಿಯಲ್ಲಿ ಕುಳಿತು ಫೋಟೋ(ಸೆಲ್ಫಿ) ತೆಗೆದುಕೊಂಡಿದ್ದ.
ಫೋಟೋ ತೆಗೆದುಕೊಂಡ ಬಳಿಕ ತಿವಾರಿಗೆ ತಾನು ಎಷ್ಟು ಪವರ್ ಫುಲ್ ಅಂತ ಜಂಬಕೊಚ್ಚಿಕೊಳ್ಳುವ ಹಂಬಲದೊಂದಿಗೆ ಅದನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿಬಿಟ್ಟಿದ್ದ. ವಿಪರ್ಯಾಸ ಎಂಬಂತೆ ಇದರಿಂದ ತಿವಾರಿಗೆ ಕಂಟಕ ಎದುರಾಗಿತ್ತು!
ಸಚಿವರ ಕೊಠಡಿಗೆ ತೆರಳಿ ಅವರ ಕುರ್ಚಿ ಮೇಲೆ ಕುಳಿತು ಫೋಟೋ ತೆಗೆಸಿಕೊಂಡ ಬಗ್ಗೆ ಜನರು ದೂರನ್ನು ನೀಡಿ, ಕಟುವಾಗಿ ಟೀಕಿಸಿದ್ದರು. ದೂರನ್ನು ಸ್ವೀಕರಿಸಿದ ನಂತರ ಸಿಂಗ್ ತನ್ನ ಕಾರ್ಯದರ್ಶಿ ಮೂಲಕ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ತಿವಾರಿಯನ್ನು ಬಂಧಿಸಿದ್ದರು.