ಛತ್ತಾರ್ ಪುರ್: ಪತಿಯೇ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿದ್ದು, ಇದರ ಪರಿಣಾಮ ಎಂಟು ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಛತ್ತಾರ್ ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಎಂಜಿನಿಯರ್ ಉಗ್ರ ಲಿಬಿಯಾದಲ್ಲಿ ಸಾವು?
ಚಾಂದ್ಲಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಜೇಂದ್ರ ಸಿಂಗ್ ನೀಡಿರುವ ಮಾಹಿತಿ ಪ್ರಕಾರ, ರಾಜಾ ಭೈಯಾ ಯಾದವ್ (42ವರ್ಷ) ಅವರ ಪತ್ನಿ ಮೂರು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಶನಿವಾರ (ಜೂನ್ 05) ನೆರೆಯ ಪನ್ನಾ ಜಿಲ್ಲೆಯ ಅತ್ತೆ ಮನೆಯಲ್ಲಿದ್ದ ಪತ್ನಿ, ಮಗು ಹಾಗೂ ಎಂಟು ವರ್ಷದ ಮಗಳನ್ನು ಕರೆ ತರುತ್ತಿದ್ದ ಸಂದರ್ಭದಲ್ಲಿ ಪಡೋಯಿ ಗ್ರಾಮದ ಬಾವಿ ಬಳಿ ಬೈಕ್ ನಿಲ್ಲಿಸಿದ್ದ ಎಂದು ತಿಳಿಸಿದ್ದಾರೆ.
ನಂತರ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಬಲವಂತದಿಂದ ಬಾವಿಗೆ ತಳ್ಳಿದ್ದ. ಅಷ್ಟೇ ಅಲ್ಲ ಪತ್ನಿ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾಗ ಕಲ್ಲನ್ನು ಎತ್ತಿ ಹಾಕಿದ್ದ, ಇದರಿಂದ ಎಂಟು ವರ್ಷದ ಹೆಣ್ಣು ಮಗು ಸಾವನ್ನಪ್ಪಿತ್ತು. ಕೊನೆಗೆ ಕೂಗಾಟ ಕೇಳಿ ಓಡಿಬಂದ ಸ್ಥಳೀಯರು ಮಹಿಳೆ ಮತ್ತು ಮೂರು ತಿಂಗಳ ಹೆಣ್ಣು ಮಗುವನ್ನು ರಕ್ಷಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಎರಡನೇ ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಪತಿ ಯಾದವ್ ಕೋಪಗೊಂಡು ಬಾವಿಗೆ ತಳ್ಳಿರುವುದಾಗಿ ಪತ್ನಿ ಪೊಲೀಸರಿಗೆ ತಿಳಿಸಿರುವುದಾಗಿ ವರದಿ ಹೇಳಿದೆ. ಘಟನಾ ಸ್ಥಳದಿಂದ ರಾಜಾ ಯಾದವ್ ಪರಾರಿಯಾಗಿದ್ದು, ಆತನ ವಿರುದ್ಧ ಕೊಲೆ ಮತ್ತು ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಸಿಂಗ್ ತಿಳಿಸಿದ್ದಾರೆ.