ಚೆನ್ನೈ: ಕರ್ತವ್ಯದಲ್ಲಿದ್ದಾಗ ಹಲ್ಲೆ ನಡೆಸಿದ ಪರಿಣಾಮ ಹಿಗ್ಗಾಮುಗ್ಗಾ ಥಳಿತಕ್ಕೊಳಗಾಗಿದ್ದ ವ್ಯಕ್ತಿ ಸಾವನ್ನಪ್ಪಿದ ನಂತರ ಪೊಲೀಸ್ ಅಧಿಕಾರಿಯನ್ನು ಬಂಧಿಸಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಬಂಧಿತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪೆರಿಯಾಸಾಮಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಸುರಕ್ಷಿತ ವಾತಾವರಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ : ಎಸ್ ಒಪಿ ಬಿಡುಗಡೆ- ಸುರೇಶ್ ಕುಮಾರ್
ನೆರೆಯ ಗ್ರಾಮದಲ್ಲಿ ಮದ್ಯಸೇವಿಸಿ ವಾಪಸ್ ಆಗುತ್ತಿದ್ದ 45 ವರ್ಷದ ಮುರುಗೇಶನ್ ಹಾಗೂ ಮತ್ತಿಬ್ಬರನ್ನು ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಮೂರು ಪೊಲೀಸರ ಜತೆ ವಾಗ್ವಾದದಲ್ಲಿ ತೊಡಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲವು ಬಾರಿ ಶೇರ್ ಆಗಿರುವುದಾಗಿ ವರದಿ ತಿಳಿಸಿದೆ.
ಈ ಸಂದರ್ಭದಲ್ಲಿ ಮುರುಗೇಶನ್ ಮೇಲೆ ಪೊಲೀಸ್ ಅಧಿಕಾರಿ ಹಿಗ್ಗಾಮುಗ್ಗಾ ಥಳಿಸುತ್ತಿರುವುದು ಒಂದು ನಿಮಿಷದ ವಿಡಿಯೋದಲ್ಲಿ ದಾಖಲಾಗಿದ್ದು, ಇದರಲ್ಲಿ ಮುರುಗೇಶನ್ ಬಿಟ್ಟುಬಿಡುವಂತೆ ಕೈಮುಗಿದು ಕೇಳಿಕೊಳ್ಳುತ್ತಿರುವುದು ಸೆರೆಯಾಗಿದೆ. ಕೊನೆಗೆ ಆತ ಪ್ರಜ್ಞೆ ತಪ್ಪಿ ರಸ್ತೆ ಮೇಲೆ ಬಿದ್ದಿರುವುದಾಗಿ ವರದಿ ವಿವರಿಸಿದೆ.
ನಂತರ ಮುರುಗೇಶ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಸೇಲಂ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಬುಧವಾರ(ಜೂನ್ 23) ಬೆಳಗ್ಗೆ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.