Advertisement
ಮತ್ತೂಂದು ವರ್ಷದಲ್ಲಿ ಮಗನನ್ನು ಕಂಪೆನಿಯವರು ಅಮೆರಿಕಕ್ಕೆ ಕಳುಹಿಸಿದಾಗ ಹೆಮ್ಮೆಪಟ್ಟುಕೊಂಡದ್ದು ಸಹಜವಲ್ಲವೆ? ಹೋಗುವ ಮೊದಲು ಮದುವೆ ಮಾಡಿಕೋ ಎಂದು ಮಗನನ್ನು ಒತ್ತಾಯಿಸಿದರೆ ಹುಡುಗ “ಎರಡು-ಮೂರು ವರ್ಷಗಳ ಮಟ್ಟಿಗೆ ಮದುವೆಯ ವಿಚಾರ ತೆಗೆಯಬೇಡಿ’ಎಂದ. “”ಯಾಕೋ? ನೀನೇ ಯಾರನ್ನಾದರೂ ನೋಡಿಟ್ಟಿದ್ದೀಯಾ?” ಎಂದು ಕಳಕಳಿಯಿಂದ ವಿಚಾರಿಸಿದರೆ, “”ಛಿ, ಛಿ, ಇಲ್ಲಪ್ಪ. ನಿಮ್ಮನ್ನು ಕೇಳದೇ ಯಾರನ್ನೂ ಮದುವೆಯಾಗುವುದಿಲ್ಲ, ಚಿಂತಿಸಬೇಡಿ” ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದ. ಆದರೂ ಹುಟ್ಟೂರಿನ ದೇವಸ್ಥಾನದಲ್ಲಿ ಅವನ ಹೆಸರಿನಲ್ಲಿ ಒಂದು ಕುಂಕುಮಾರ್ಚನೆ ಮಾಡಿ, ಅವನನ್ನು ಹರಸುವಂತೆ ದೇವರನ್ನು ಬೇಡಿ, ಇಬ್ಬರೂ ಸಾಷ್ಟಾಂಗಪ್ರಣಾಮ ಮಾಡಿ ಅಮೆರಿಕಕ್ಕೆ ನಿಶ್ಚಿಂತೆಯಿಂದ ಕಳಿಸಿಕೊಟ್ಟರು.
Related Articles
Advertisement
ಮಹಡಿಯ ಮನೆಯನ್ನೇನೋ ಕೆಲವು ತಿಂಗಳು ಬಾಡಿಗೆಗೆ ಕೊಟ್ಟಿದ್ದರು. ಆದರೆ, ಬಿಡಿಸಿಕೊಳ್ಳುವುದು ರೇಜಿಗೆಯಾಯಿತು. “”ಆ ಜುಜುಬಿ ಬಾಡಿಗೆಗೆ ಯಾಕೆ ಆಸೆ ಪಡುತ್ತೀರಿ? ಬೀಗ ಹಾಕಿಡಿ” ಎಂದ ಮಗ. ಈಗ ಅವನ ಹೆಂಡತಿಯೂ ಅಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಳೆ.
“”ನನ್ನ ಮಗ ಅಂತ ಹೇಳುತ್ತಿಲ್ಲ. ಅವನ ಮನಸ್ಸು ಒಳ್ಳೆಯದು. ಚಿಕ್ಕವನಿರುವಾಗ ಇಷ್ಟು ಜವಾಬ್ದಾರಿ ತೆಗೆದುಕೊಳ್ಳಬಹುದು ಅಂತ ನಾವೇ ಎಣಿಸಿರಲಿಲ್ಲ. ಈಗ ನೋಡಿ, ಅವನ ಹೆಂಡತಿಯೂ ಬಸುರಿಯಂತೆ. ಮಾರ್ನಿಂಗ್ ಸಿಕ್‌ನೆಸ್. ಎಲ್ಲದಕ್ಕೂ ಏನು ಮಾಡಬೇಕೆಂದು ದಿನಾ ಅಮ್ಮನಿಗೆ ಫೋನ್ ಮಾಡಿ ಕೇಳುತ್ತಾನೆ” ಎಂದು ನೆರೆಹೊರೆಯವರೊಡನೆ ಹೆಮ್ಮೆಯಿಂದ ಹೇಳಿದರು. ಆರು ತಿಂಗಳು ಸೊಸೆಯ ಅಪ್ಪಅಮ್ಮಂದಿರು, ಆರು ತಿಂಗಳು ಇವರು ಎಂದು ಐದಾರು ಬಾರಿ ಅಮೆರಿಕೆಯ ಯಾತ್ರೆ ನಡೆಯಿತು.
ಒಂದು ದಿನ ಹೆಂಡತಿ ಹೇಳಿದಳು, “”ಇನ್ನು ನಾನು ಹೋಗುವುದಿಲ್ಲ. ಅಲ್ಲಿ ಮನೆಯ ಒಳಗಡೆಯೇ ಇರಬೇಕು. ಹೊರಗಡೆ ಹೋದರೆ ಒಬ್ಬರೂ ರಸ್ತೆಯಲ್ಲಿ ಕಾಣುವುದಿಲ್ಲ. ಮಾತನಾಡಲು ಒಂದು ಜನ ಸಿಕ್ಕುವುದಿಲ್ಲ. ನಾವೇನು ನರ್ಸ್ ಕೆಲಸ ಮಾಡುತ್ತಲೇ ಇರುವುದ?”
“”ನನಗೂ ಹಾಗೆಯೇ. ಇಪ್ಪತ್ತನಾಲ್ಕು ಗಂಟೆ ವಿಮಾನದಲ್ಲಿ ಕೂರುವುದೆಂದರೆ ಮಂಡಿನೋವು ಬೇರೆ. ಡಾಕ್ಟರರು ಡಯಾಬಿಟೀಸ್ ಇದೆ ಎಂದಿದ್ದಾರೆ” ಎಂದು ಪತಿಯೂ ಉತ್ತರಿಸಿದರು. ಮಹಡಿ ಮನೆಯಲ್ಲಿ ಇಬ್ಬರೇ ಒಬ್ಬರನ್ನೊಬ್ಬರು ಭೇಟಿಯಾಗುತ್ತ¤ ಮೌನವಾಗಿ ದಿನದೂಡತೊಡಗಿದರು.
ಒಂದು ದಿನ ದಂಪತಿಗಳಲ್ಲಿ ಒಬ್ಬರು ತೀರಿಕೊಂಡರು. ಚಿತೆಗೆ ಬೆಂಕಿ ಕೊಡಲು, ಸಪಿಂಡೀಕರಣ ಶ್ರಾದ್ಧ ನಡೆಸಲು ಮಗ ಅಮೆರಿಕದಿಂದ ಬಂದಿದ್ದ. ಎಲ್ಲ ಮುಗಿದ ಮೇಲೆ ಹೇಳಿದ, “”ಒಬ್ಬರೇ ಹೇಗಿರುತ್ತೀರಿ? ಅಲ್ಲಿಯ ಹವೆ ನಿಮಗೆ ಹಿಡಿಸಲ್ಲ. ಒಳ್ಳೆಯ ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ. ಹೊತ್ತುಹೊತ್ತಿಗೆ ಆಹಾರ-ಔಷಧಿ ಕೊಡುತ್ತಾರೆ. ಡಾಕ್ಟರರ ವ್ಯವಸ್ಥೆಯೂ ಇದೆ. ನಿಯಮಿತವಾಗಿ ಚೆಕ್-ಅಪ್ ಆಗುತ್ತದೆ. ಖರ್ಚು ಎಷ್ಟಾದರೂ ಪರವಾಗಿಲ್ಲ. ತಿಂಗಳು ತಿಂಗಳೂ ಡಾಲರ್ಸ್ ಕಳಿಸುತ್ತೇನೆ”.
“ತಥಾಸ್ತು’ ಎನ್ನದೇ ಬೇರೆ ಗತಿಯಿಲ್ಲ. ಮಹಡಿ ಮನೆಗೆ ಬೀಗ ಜಡಿದು ಅವರು ವೃದ್ಧಾಶ್ರಮ ಸೇರಿದರು.ಈಗ ಅವರಿಗೆ ಎಪ್ಪತ್ತೋ ಎಂಬತ್ತೋ! ಜೊತೆಗಾರ/ತಿ ಪಕ್ಕದಲ್ಲಿಲ್ಲ. ಮನಸ್ಸಿನ, ದೇಹದ ನೋವನ್ನು ಹಂಚಿಕೊಳ್ಳಲು ಯಾರೂ ಇಲ್ಲ. ಎರಡೋ ಮೂರೋ ವರ್ಷಕ್ಕೊಮ್ಮೆ ಮಗ ಹೆಂಡತಿ-ಮಕ್ಕಳ ಜೊತೆ ಬಂದರೂ ಹೆಂಡತಿಯ ತವರು ಮನೆಯಲ್ಲೇ ಇರುತ್ತಾನೆ. ಮಗಳು ಬಂದರೆ ತಾಯಿ ಅಥವಾ ತಂದೆ ಬದುಕಿಲ್ಲ ಎನ್ನುವ ನೆವವೊಡ್ಡಿ ಹೊಟೇಲಿನಲ್ಲಿ ಉಳಕೊಳ್ಳುತ್ತಾರೆ. “”ಮೊಮ್ಮಕ್ಕಳನ್ನು ಕರೆದುಕೊಂಡು ಬರಲಿಲ್ಲವೇ” ಎಂದರೆ, “”ಅವರಿಗೆ ನಮ್ಮ ತಾಯಿನಾಡಿನ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಡವೇ? ತಿರುಗಾಡಲು ಕರೆದುಕೊಂಡು ಹೋಗಿದ್ದಾರೆ/ಳೆ” ಎಂಬ ಉತ್ತರ. ಮರಳುವ ಮುನ್ನ ಒಮ್ಮೆ ಬಂದು ಭೇಟಿಯಾಗುತ್ತಾರೆ. ಒಬ್ಬರೇ ಬರುತ್ತಾರೆ. ವೃದ್ಧಾಶ್ರಮ ನಡೆಸುವವರನ್ನು ಕಂಡು, “”ಫೀಸು ಎಷ್ಟಾದರೂ ಪರವಾಗಿಲ್ಲ, ಕಳಿಸಿಕೊಡುತ್ತೇನೆ, ಚೆನ್ನಾಗಿ ನೋಡಿಕೊಳ್ಳಿ” ಎಂದು ವಿದಾಯ ಹೇಳುತ್ತಾರೆ. ಅವರು ಕಿಟಿಕಿಯ ಬಳಿ ಕೂತು ಮೌನವಾಗಿ ಹೊರಗೆ ನೋಡುತ್ತ ಕೂರುತ್ತಾರೆ. ಕಿಟಿಕಿಯ ಬಳಿ ಕಾಗೆಯೊಂದು ಬಂದು ಅವರು ತಿಂದುಳಿದ ಇಡ್ಲಿಯ ತುಂಡನ್ನೋ ಅನ್ನದ ಅಗುಳನ್ನೋ ಕುಕ್ಕಲು ಕಾಯುತ್ತಾ ಇರುತ್ತದೆ. ಅವರು ಯೋಚಿಸುತ್ತಾರೆ- ಎಲ್ಲಿ ತಪ್ಪಿದೆ? ತಾನು ಯಾರಿಗೂ ಕೆಟ್ಟದೆಣಿಸಿಲ್ಲ. ತನ್ನ ಕರ್ತವ್ಯಗಳನ್ನು ಹೊಟ್ಟೆಬಟ್ಟೆ ಕಟ್ಟಿಕೊಂಡು ಪ್ರಾಮಾಣಿಕವಾಗಿ ಮಾಡಿದೆ. ಪಿತೃಗಳಿಗೆ ವರ್ಷಕ್ಕೊಮ್ಮೆ ಪಿಂಡ ಕೊಟ್ಟಿದ್ದೇನೆ. ಭಕ್ತಿಯಿಂದ ಸತ್ಯನಾರಾಯಣ ಪೂಜೆಯನ್ನು ಮಾಡಿದ್ದೇನೆ. ನೆನಪಾಗುತ್ತದೆ- ಸೈಕಲ್ಲಿನಲ್ಲಿ ಬುತ್ತಿ ಕಟ್ಟಿಸಿಕೊಂಡು ಕಚೆೇರಿಗೆ ಹೋದದ್ದು, ಕಾಲೇಜಿನ ಫೀಸು ಕಟ್ಟಲು ಪರಿಚಯದವರ ಕೈಕಾಲು ಬಿದ್ದು ಬೇಡಿಕೊಂಡದ್ದು, ಮೊಮ್ಮಕ್ಕಳು ಹುಟ್ಟಿದಾಗ ಬಾಣಂತನ ಮಾಡಿದ್ದು ಎಲ್ಲ. ಶೂನ್ಯದಲ್ಲಿ ದೃಷ್ಟಿ ಕೀಲಿಸಿ ಕೂತಿದ್ದಾಗ ಮೂಡಿದ ನಿರ್ವಾತದಲ್ಲಿ ಮಕ್ಕಳು ಕೇಳುತ್ತಿದ್ದ ಪ್ರಶ್ನೆ ಮರುಕಳಿಸುತ್ತದೆ - “ಮಮ್ಮಾ… ವಾಟ್ಸ್ ಯುವರ್ ಪ್ರಾಬ್ಲೆಮ್?’ ಕುಂಕುಮಾರ್ಚನೆಯ ಕೆಂಪನೆಯ ಬಣ್ಣ ಕಣ್ಣೆದುರು. ಚೀರಿಡಬೇಕೆಂದೆನಿಸುತ್ತದೆ- “ಯೆಸ್ ಮೈ ಸನ್, ಎವೆರಿಥಿಂಗ್ ಈಸ್ ಅ ಪ್ರಾಬ್ಲೆಮ್. ಎವೆರಿಥಿಂಗ್. ಯಾವಾಗ ಬಿಡುಗಡೆಯೋ? ಅದನ್ನೇ ಕಾಯುತ್ತ ಇದ್ದೇನೆ’. ಗೋಪಾಲಕೃಷ್ಣ ಪೈ