Advertisement

ಮಮತಾ ಶಕ್ತಿ ಪ್ರದರ್ಶನ; ಮೋದಿ ವಿರುದ್ಧ ನಾಯಕರು ಹೇಳಿದ್ದೇನು?

09:58 AM Jan 19, 2019 | Sharanya Alva |

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಆಡಳಿತದಲ್ಲಿರುವ ಬಿಜೆಪಿಯನ್ನು ಕಟ್ಟಿ ಹಾಕುವ ಸಲುವಾಗಿ ವಿಪಕ್ಷಗಳನ್ನು ಒಗ್ಗೂಡಿಸಿರುವ ಟಿಎಂಸಿ ನಾಯಕಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಕೋಲ್ಕತಾದಲ್ಲಿ ಆಯೋಜಿಸಿರುವ ಪ್ರತಿಪಕ್ಷಗಳ ಮೆಗಾರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisement

ಮಹಾ ರಾಲಿಯಲ್ಲಿ ಕರ್ನಾಟಕದಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದಾರೆ. ಸಮಾವೇಶದಲ್ಲಿ ವಾಗ್ದಾಳಿ ನಡೆಸಿದ ನಾಯಕರ ಚುಟುಕು ಭಾಷಣ ಇಲ್ಲಿದೆ…

ಇದು ಒಬ್ಬ ವ್ಯಕ್ತಿಯನ್ನು ಅಧಿಕಾರದಿಂದ ಕಿತ್ತೊಗೆಯುವ ವಿಷಯವಲ್ಲ: ಯಶವಂತ ಸಿನ್ನಾ

ಇದು ಕೇವಲ ಒಬ್ಬ ವ್ಯಕ್ತಿಯನ್ನು(ಪ್ರಧಾನಿ ನರೇಂದ್ರ ಮೋದಿ) ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸುವ ಪ್ರಶ್ನೆಯಲ್ಲ. ನಾವೆಲ್ಲ ಒಗ್ಗಟ್ಟಾಗಿ ಬಲಪಂಥೀಯ ಸಿದ್ದಾಂತವನ್ನು ಸೋಲಿಸಬೇಕಾಗಿದೆ. ನಿಜಕ್ಕೂ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಸತ್ಯಾಂಶವನ್ನು ತಿಳಿದುಕೊಳ್ಳಬೇಕಾಗಿದೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರಕ್ಕೆ ಬೇಕಾಗಿರುವುದು ಸಮಾಜ ಮತ್ತು ದೇಶವನ್ನು ಒಡೆಯುವ ಕೆಲಸ ಎಂದು ಮಾಜಿ ಕೇಂದ್ರ ಸಚಿವ, ಮಾಜಿ ಬಿಜೆಪಿ ಮುಖಂಡ ಯಶವಂತ್  ಸಿನ್ನಾ ಆರೋಪಿಸಿದರು.

Advertisement

ನಮಗೆ ಒಂದೇ ಒಂದು ಗುರಿ: ಅರುಣ್ ಶೌರಿ

ನಮಗೆ (ವಿರೋಧ ಪಕ್ಷಗಳು ಮತ್ತು ಮುಖಂಡರು) ಕೇವಲ ಒಂದೇ ಒಂದು ಗುರಿ..ಅದೇನೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಬೇಕು. ದೇಶಕ್ಕಾಗಿ ನಾವು ತ್ಯಾಗ ಮಾಡಲೇಬೇಕಾಗಿದ್ದು, ಅದನ್ನು ನಾವು ಪ್ರೀತಿಯಿಂದಲೇ ಮಾಡಬೇಕಾಗಿದೆ. ಯಾವ ಸರ್ಕಾರವೂ ಇಷ್ಟೊಂದು ಸುಳ್ಳನ್ನು ಹೇಳಿರಲಿಲ್ಲವಾಗಿತ್ತು ಎಂದು ಮಾಜಿ ಬಿಜೆಪಿ ಮುಖಂಡ ಅರುಣ್ ಶೌರಿ ಹೇಳಿದರು.

ಮೋದಿ ಸರ್ಕಾರ ಟೀಕೆಯನ್ನು ಸಹಿಸೋದಿಲ್ಲ: ಅಭಿಷೇಕ್ ಸಿಂಘ್ವಿ

ಮೈತ್ರಿ ಮಾಡಿಕೊಳ್ಳುವ ಕಾಲ ಈಗ ಸನ್ನಿಹಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವುದೇ ಟೀಕೆಯನ್ನು ಸಹಿಸಿಕೊಳ್ಳುವುದಿಲ್ಲ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜನರ ದಿಕ್ಕು ತಪ್ಪಿಸಿ ಮತ ಪಡೆಯುವ ಹುನ್ನಾರ ನಡೆಸಿದ್ದಾರೆ. ಹೀಗಾಗಿ ನಾನು ಮಮತಾ ದೀದಿ ಬಳಿ ಮನವಿ ಮಾಡಿಕೊಳ್ಳುತ್ತೇನೆ..ಮಹಾಘಟಬಂಧನ್ ನಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಘ್ವಿ ತಿಳಿಸಿದರು.

ಪ್ರಾದೇಶಿಕ ನಾಯಕರು ತುಂಬಾ ಶಕ್ತಿಶಾಲಿ: ದೇವೇಗೌಡ

ಬಹಳಷ್ಟು ನಾಯಕರು ಇಲ್ಲಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ಹೋಗಬೇಕಾಗಿದೆ. ಪ್ರಾದೇಶಿಕ ಪಕ್ಷಗಳು ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಬೇಕು. ನನ್ನ ಅನುಭವದ ಪ್ರಕಾರ ಒಗ್ಗಟ್ಟಾಗಿ ಹೋಗೋದು ತುಂಬಾ ಕಷ್ಟದ ಕೆಲಸ. ಹೀಗಾಗಿ ನಾವು ಒಗ್ಗಟ್ಟಾಗಿ ಬಿಜೆಪಿಯನ್ನು ಎದುರಿಸಬೇಕಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಪ್ರಾದೇಶಿಕ ಪಕ್ಷಗಳ ಶಕ್ತಿ ಬಿಜೆಪಿಗೆ ಗೊತ್ತಾಗಿದೆ: ಎಚ್.ಡಿ.ಕುಮಾರಸ್ವಾಮಿ

ನನ್ನ ಪ್ರಕಾರ ಇದು ಕೇವಲ ಆರಂಭವಷ್ಟೇ. ದೀದಿ ಸರಳತೆಯ ಸ್ವರೂಪವಾಗಿದ್ದಾರೆ. ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಿವೆ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ. ಈ ನಿಟ್ಟಿನಲ್ಲಿ ಈ ವೇದಿಕೆಯನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಪ್ರಾದೇಶಿಕ ಪಕ್ಷಗಳ ಶಕ್ತಿ ಬಿಜೆಪಿಗೆ ಗೊತ್ತಾಗಿದೆ ಎಂದು ಕರ್ನಾಟಕದ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಂಗಾಲಿ ಭಾಷೆಯಲ್ಲಿಯೇ ಆರಂಭಿಕವಾಗಿ ಭಾಷಣ ಮಾಡಿ ಗಮನ ಸೆಳೆದರು. ಬಳಿಕ ಇಂಗ್ಲಿಷ್ ನಲ್ಲಿ ಭಾಷಣ ಮುಂದುರಿಸಿದ್ದರು.

ದೇಶದಲ್ಲಿ ಅನ್ನದಾತರು ಸಂಕಷ್ಟದಲ್ಲಿದ್ದಾರೆ: ಖರ್ಗೆ

ದೇಶದಲ್ಲಿ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಅಷ್ಟೇ ಅಲ್ಲ ರಾಜಕೀಯವಾಗಿ ದೇಶದ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಮಹಾಘಟಬಂಧನ್ ಮೂಲಕ ಒಗ್ಗಟ್ಟಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಾದ ಕಾಲ ಬಂದಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next