Advertisement

ಇಂದು ಮಮತಾ ಮೆಗಾ ಶೋ

12:30 AM Jan 19, 2019 | |

ಹೊಸದಿಲ್ಲಿ/ಕೋಲ್ಕತಾ: ಮುಂದಿನ ಲೋಕಸಭೆ ಚುನಾವಣೆ ಬಳಿಕ ಕೇಂದ್ರದಲ್ಲಿ ಸರಕಾರ ರಚನೆ ಮಾಡುವ ಮೈತ್ರಿಕೂಟದ ಪ್ರಧಾನ ಭಾಗವಾಗಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಅದಕ್ಕಾಗಿಯೇ ಕೋಲ್ಕತಾದಲ್ಲಿ ಶನಿವಾರ ಪ್ರತಿಪಕ್ಷಗಳ ಬೃಹತ್‌ ರ್ಯಾಲಿ ಆಯೋಜಿಸಿದ್ದಾರೆ.

Advertisement

ಕಾಂಗ್ರೆಸ್‌ ಪ್ರಧಾನ ನಾಯಕರಾಗಿರುವ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಗೆ ಆಹ್ವಾನ ನೀಡಲಾಗಿದ್ದರೂ ಅವರು ಈ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಆ ಪಕ್ಷದ ಪರವಾಗಿ ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ| ಅಭಿಷೇಕ್‌ ಮನು ಸಿಂಘ್ವಿ ಭಾಗವಹಿಸಲಿದ್ದಾರೆ. ಇನ್ನು ಬಿಎಸ್‌ಪಿ ನಾಯಕಿ ಮಾಯಾವತಿ ಗೈರಾಗಲಿದ್ದು, ಅವರ ಪರವಾಗಿ ರಾಜ್ಯಸಭಾ ಸದಸ್ಯ ಸತೀಶ್ಚಂದ್ರ ಮಿಶ್ರಾ ಉಪಸ್ಥಿತರಿರಲಿದ್ದಾರೆ.

ರ್ಯಾಲಿಗೆ ಬೆಂಬಲ ವ್ಯಕ್ತಪಡಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದಾರೆ. ಏಕೀಕೃತ ಭಾರತಕ್ಕೆ  ಸದೃಢ ಸಂದೇಶವನ್ನು ಕಾರ್ಯಕ್ರಮ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ನಮ್ಮ ತತ್ವಗಳನ್ನು ಎತ್ತಿ ಹಿಡಿಯುವಲ್ಲಿ ಬಂಗಾಳದ ಜನತೆ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಏಕೀಕೃತ ಭಾರತಕ್ಕಾಗಿ ಸಮರ್ಥ ಸಂದೇಶ ರವಾನಿಸುವಲ್ಲಿ ಮಮತಾ  ಆಯೋಜಿಸಿರುವ ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತೇನೆ’ ಎಂದು ಬರೆದಿದ್ದಾರೆ. 

ಯಾರೆಲ್ಲ ಭಾಗಿ?: ರ್ಯಾಲಿಯಲ್ಲಿ ಇಪ್ಪತ್ತು ಪ್ರತಿಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌,  ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಡಾ.ಫಾರೂಕ್‌ ಅಬ್ದುಲ್ಲಾ, ಮಾಜಿ ಸಿಎಂ ಒಮರ್‌ ಅಬ್ದುಲ್ಲಾ, ಎಸ್‌ಪಿ ಅಧ್ಯಕ್ಷ ಅಖೀಲೇಶ್‌ ಯಾದವ್‌, ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌, ಬಿಜೆಪಿಯ ಭಿನ್ನಮತೀಯ ನಾಯಕ ಶತ್ರುಘ್ನ ಸಿನ್ಹಾ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಆರ್‌ಎಲ್‌ಡಿ ನಾಯಕ ಅಜಿತ್‌ ಸಿಂಗ್‌, ಮಾಜಿ ಸಚಿವರಾದ ಅರುಣ್‌ ಶೌರಿ, ಯಶವಂತ ಸಿನ್ಹಾ, ಪಟೇಲರಿಗೆ ಮೀಸಲು ಹೋರಾಟದ ನಾಯಕ ಹಾರ್ದಿಕ್‌ ಭಾಗವಹಿಸುವ ಪ್ರಮುಖರು.

ಖರ್ಗೆ, ಸಿಂಘ್ವಿ ಕೂಡ ಶನಿವಾರದ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್‌ ಸಮಿತಿ ಮನವಿ ಮಾಡಿತ್ತು ಎನ್ನಲಾಗಿದೆ. ಬಂಗಾಳದಲ್ಲಿ ರಾಜ್ಯ ಸರಕಾರದ ವಿರುದ್ಧ ಹೋರಾಡುವುದಕ್ಕೆ ಇದು ಅಡ್ಡಿಯಾಗಲಿದೆ ಎಂದು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Advertisement

ಬಿಎಸ್‌ಪಿ ನಾಯಕಿ ಮಾಯಾವತಿ ಗೈರು ಹಾಜರಾಗುವ ಬಗ್ಗೆ ಪ್ರತಿಕ್ರಿಯೆ ನೀಡಿದ ಟಿಎಂಸಿ ಹಿರಿಯ ನಾಯಕರೊಬ್ಬರು “ಮಾಯಾವತಿ ಪರ ಸತೀಶ್ಚಂದ್ರ ಮಿಶ್ರಾ ಆಗಮಿಸಲಿದ್ದಾರೆ. ಅದು ಹೆಮ್ಮೆಯ ವಿಚಾರ. ದೇಶದಲ್ಲಿ ಮಮತಾ ಬ್ಯಾನರ್ಜಿ ಪ್ರಮುಖ ಪ್ರತಿಪಕ್ಷ ನಾಯಕರಲ್ಲಿ ಒಬ್ಬರು. ಕೇಂದ್ರದ ಮಾಜಿ ಸಚಿವರಾಗಿ, ಮುಖ್ಯಮಂತ್ರಿಗಳಾಗಿ ಅವರಿಗೆ ಅನುಭವ ಇದೆ. ಬಿಜೆಪಿ ವಿರುದ್ಧ ಹೋರಾಡುವ ಸಾಮರ್ಥ್ಯ ಇರುವವರಲ್ಲಿ ನಮ್ಮ ನಾಯಕರೂ ಒಬ್ಬರು’ ಎಂದು ಹೇಳಿದ್ದಾರೆ. 

ಬಿಜೆಪಿಗೆ ರಾಜೀನಾಮೆ: ಬಿಹಾರದ ಪೂರ್ನಿಯಾದ ಮಾಜಿ ಸಂಸದ, ಬಿಜೆಪಿ ನಾಯಕ ಉದಯ ಸಿಂಗ್‌ ಪಕ್ಷಕ್ಕೆ ರಾಜೀನಾಮೆ ನೀಡಿ, ಮಹಾ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಜಾರ್ಖಂಡ್‌ನ‌ಲ್ಲಿ ಮೈತ್ರಿ: ಜಾರ್ಖಂಡ್‌ನ‌ಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿಗೆ ಕಾಂಗ್ರೆಸ್‌ ಸಮ್ಮತಿಸಿದೆ. ಕಾಂಗ್ರೆಸ್‌, ಜಾರ್ಖಂಡ್‌ ಮುಕ್ತಿ ಮೋರ್ಚಾ, ಆರ್‌ಜೆಡಿ, ಸಿಪಿಐ, ಜಾರ್ಖಂಡ್‌ ವಿಕಾಸ್‌ ಮೋರ್ಚಾಗಳನ್ನು ಒಳಗೊಂಡ ಮೈತ್ರಿಕೂಟ ರಚನೆಯಾಗಲಿದೆ. 14 ಲೋಕಸಭಾ ಸ್ಥಾನಗಳ ಪೈಕಿ ಜೆಎಂಎಂ 4, ಆರ್‌ಜೆಡಿ 1, ಜೆವಿಎಂ 2, ಸಿಪಿಐ 1, ಇನ್ನುಳಿದ 6 ಸ್ಥಾನಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸುವ ಮಾತುಕತೆ ಪೂರ್ತಿಯಾಗಿವೆ.  ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ರನ್ನು ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟದ ಸಿಎಂ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಮಾರ್ಚ್‌ನಲ್ಲಿ ಚುನಾವಣಾ ದಿನಾಂಕ ಪ್ರಕಟ?
ಲೋಕಸಭೆ ಮಹಾ ಸಮರಕ್ಕೆ ರಾಜಕೀಯ ಪಕ್ಷಗಳು ಸಿದ್ಧವಾಗುತ್ತಿರುವಂತೆಯೇ, ಮಾರ್ಚ್‌ ಮೊದಲ ವಾರದಲ್ಲಿ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. ಎಷ್ಟು ಹಂತದಲ್ಲಿ ಮತದಾನ ನಡೆಸ ಬೇಕು ಎಂಬ ಬಗ್ಗೆ ಆಯೋಗ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ಶುಕ್ರವಾರ ದೃಢಪಡಿಸಿವೆ. ಹಾಲಿ ಚುನಾವಣೆ 6-7 ಹಂತಗಳಲ್ಲಿ ನಡೆವ ಸಾಧ್ಯತೆ ಇದೆ. ಚುನಾವಣಾ ದಿನಾಂಕಗಳ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಈ ವಿಚಾರ ಮಹತ್ವದ್ದಾಗಿದೆ. ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ, ಅರುಣಾಚಲ ವಿಧಾನಸಭೆಗಳಿಗೂ ಚುನಾವಣೆ ನಡೆಸಲಾಗುತ್ತದೆ. 2014ರಲ್ಲಿ ಮಾ.2ರಂದು ದಿನಾಂಕ ಪ್ರಕಟಿಸಲಾಗಿತ್ತು.

ಅತ್ಯಂತ ಹಿಂದುಳಿದ ವರ್ಗದವರಿಗೆ ಶೇ.27ರಷ್ಟು ಮೀಸಲು ನೀಡುವ ಬೇಡಿಕೆ ಈಡೇರದಿದ್ದರೆ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೇವೆ. ಎನ್‌ಡಿಎಯಲ್ಲಿರುವ ನಾವು ಬೇಕೋ ಬೇಡವೋ ಎಂಬ ಬಗ್ಗೆ ಬಿಜೆಪಿ ತೀರ್ಮಾನಿಸಲಿ.
ಒ.ಪಿ.ರಾಜ್‌ಭರ್‌ ಎಸ್‌ಬಿಎಸ್‌ಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next