ಕೋಲ್ಕತಾ: ಟಿಎಂಸಿ ಹಿರಿಯ ಮುಖಂಡ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಪ್ತ ಮದನ್ ಮಿತ್ರಾ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದಕ್ಕೆ ಬಿಜೆಪಿ ಸಂಸದ ದಿಲೀಪ್ ಘೋಷ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಆಯುಷ್ಮಾನ್ ಭಾರತ್ ನಡಿ ವಿರಳ ಕಾಯಿಲೆಗಳಿಗೂ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ: ಸುಧಾಕರ್
ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ಮುಖಂಡ, ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ತಪಸ್ ರೇ, ತಾನು ಮುಂಬರುವ ದಿನಗಳಲ್ಲಿ ರಾಜಕೀಯ ತ್ಯಜಿಸುವುದಾಗಿ ಹೇಳಿಕೆ ನೀಡಿದ್ದರು. ಬಳಿಕ ಇದೀಗ ಮತ್ತೊಬ್ಬ ಮುಖಂಡ, ಮಮತಾ ಆಪ್ತ ಮದನ್ ಮಿತ್ರಾ ಕೂಡಾ ರಾಜಕೀಯ ತ್ಯಜಿಸುವುದಾಗಿ ತಿಳಿಸಿದ್ದಾರೆ.
ಟಿಎಂಸಿ ಮುಖಂಡರ ಈ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ಸಂಸದ ದಿಲೀಪ್ ಘೋಷ್ ಪ್ರತಿಕ್ರಿಯೆ ನೀಡಿದ್ದು, ಇದಕ್ಕೆ ಸ್ಮಶಾನ ವೈರಾಗ್ಯ ಎಂದು ಕರೆಯುತ್ತಾರೆ. ಅಂದರೆ ಜನರು ಅಂತ್ಯಕ್ರಿಯೆ ನಡೆಯುವ ವೇಳೆ ಸ್ಮಶಾನಕ್ಕೆ ಭೇಟಿ ಕೊಟ್ಟಾಗ ಇಂತಹ ಭಾವನೆ ಬರುತ್ತದೆ. ಮನುಷ್ಯನ ಜೀವನದಲ್ಲಿಯೂ ಹಾಗೆ ಎಲ್ಲವೂ ಮುಗಿಯಿತು ಎಂಬಂತಾಗುತ್ತದೆ. ಅದೇ ರೀತಿ ಟಿಎಂಸಿ ಮುಖಂಡರಿಗೂ ಆಗಿದೆ ಎಂದು ವ್ಯಂಗ್ಯವಾಡಿದರು.
ಈಗಾಗಲೇ ಟಿಎಂಸಿಯ ಕೆಲವು ಮುಖಂಡರು ರಾಜಕೀಯದಿಂದ ನಿವೃತ್ತಿಯಾಗುವ ಮಾತುಗಳನ್ನಾಡಿದ್ದಾರೆ. ಈ ಮೊದಲು ಟಿಎಂಸಿಯಲ್ಲಿ ಎಲ್ಲವೂ ಸರಿ ಇತ್ತು. ಆದರೆ ಭ್ರಷ್ಟಾಚಾರ ಪ್ರಕರಣದಲ್ಲಿ ಟಿಎಂಸಿ ಮುಖಂಡರು ಜೈಲು ಸೇರುತ್ತಿದ್ದಂತೆಯೇ, ಕೆಲವರು ರಾಜಕೀಯ ತ್ಯಜಿಸುವ ಕುರಿತು ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ಕೇವಲ ನಾಟಕ. ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಕಾಂಗ್ರೆಸ್ ನಾಟಕದ ಪಕ್ಷವಾಗಿದೆ ಎಂದು ಘೋಷ್ ತಿಳಿಸಿದ್ದಾರೆ.