ನವದೆಹಲಿ: ಕೋವ್ಯಾಕ್ಸಿನ್ ಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಮಧ್ಯಪ್ರವೇಶಿಸಬೇಕೆಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಜೂನ್ 24) ಪತ್ರ ಬರೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗೃಹಸಾಲಗಾರನ ಒಪ್ಪಿಗೆ ಇಲ್ಲದೆ ಬಡ್ಡಿದರ ಬದಲಾಯಿಸಲು ಸಾಧ್ಯವಿಲ್ಲ: ಗ್ರಾಹಕ ಆಯೋಗ
ಹಲವಾರು ದೇಶಗಳಲ್ಲಿ ಇನ್ನೂ ಕೋವಿಡ್ ಲಸಿಕೆಗೆ ಅಧಿಕೃತ ಮಾನ್ಯತೆ ಸಿಕ್ಕಿಲ್ಲ ಎಂದು ಮಮತಾ ತಿಳಿಸಿದ್ದಾರೆ. ಕೋವ್ಯಾಕ್ಸಿನ್ ಗೆ ವಿಶ್ವಸಂಸ್ಥೆಯಿಂದ ಶೀಘ್ರವೇ ಮಾನ್ಯತೆ ಸಿಗುವ ಬಗ್ಗೆ ಪ್ರಧಾನಿ ಮೋದಿ ಅವರು ಕೂಡಲೇ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ, ಇದರಿಂದ ವಿದ್ಯಾರ್ಥಿಗಳು ಯಾವುದೇ ಸಮಸ್ಯೆಯನ್ನು ಎದುರಿಸಲಾರರು ಎಂದು ಮಮತಾ ತಿಳಿಸಿದ್ದಾರೆ.
ಕೋವ್ಯಾಕ್ಸಿನ್ ಗೆ ವಿಶ್ವಸಂಸ್ಥೆಯಿಂದ ಅಧಿಕೃತ ಮಾನ್ಯತೆ ಲಭ್ಯವಾದರೆ ಇದರಿಂದ ಉದ್ಯೋಗ, ಶಿಕ್ಷಣ ಸೇರಿದಂತೆ ಇನ್ನಿತರ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ತೆರಳುವವರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ವರದಿ ಹೇಳಿದೆ.
ಒಂದು ವೇಳೆ ಕೋವ್ಯಾಕ್ಸಿನ್ ಪಡೆದ ಜನರನ್ನು ವಿದೇಶಕ್ಕೆ ಪ್ರಯಾಣಿಸದಂತೆ ನಿರ್ಬಂಧ ವಿಧಿಸದಿರುವ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.