ನವದೆಹಲಿ : ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿಯು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದ್ದು, ನಂದಿಗ್ರಾಮದಲ್ಲಿ ದೀದಿಯ ವಿರುದ್ಧ ಸುವೇಂದು ಅಧಿಕಾರಿಯನ್ನು ಕಣಕ್ಕಿಳಿಸಿದೆ.
ಭಾರೀ ಕುತೂಹಲ ಕೆರಳಿಸಿರುವ ನಂದಿಗ್ರಾಮ ಕ್ಷೇತ್ರದಲ್ಲಿ ಇದೀಗ ಇಬ್ಬರು ಘಟಾನುಘಟಿಗಳು ಚುನಾವಣೆ ಎದುರಿಸುತ್ತಿದ್ದಾರೆ, ನಿನ್ನೆ ಮಮತಾ ಬ್ಯಾನರ್ಜಿ ಘೋಷಣೆಯೊಂದನ್ನು ಮಾಡಿದ್ದು, ನಾನು ನಂದಿಗ್ರಾಮದಲ್ಲೇ ಚುನಾವಣೆಯನ್ನು ಎದುರಿಸುವುದಾಗಿ ಹೇಳಿದ್ದರು. ಅಲ್ಲದೆ ಭೊವನಿಪುರ್ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಅಂತಾನು ತಿಳಿಸಿದ್ರು.
ಸುವೆಂದು ಅಧಿಕಾರಿ ಈ ಹಿಂದೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. ಸದ್ಯ ಬಿಜೆಪಿ ಸೇರಿರುವ ಸುವೆಂದು ನಂದಿಗ್ರಾಮ ಕ್ಷೇತ್ರದಲ್ಲಿ ನಾನು ಮಮತಾ ಬ್ಯಾನರ್ಜಿಯವರನ್ನ ಸೋಲಿಸ್ತೇನೆ. ಇಲ್ಲವಾದರೆ ರಾಜಕೀಯಕ್ಕೆ ವಿದಾಯ ಹೇಳ್ತೇನೆ ಎಂದಿದ್ದರು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ 57 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಅಂತಿಮಗೊಳಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಶನಿವಾರ ಮಾಹಿತಿ ನೀಡಿದ್ದಾರೆ.