ಕೋಲ್ಕತ್ತಾ : ಪ್ರಸ್ತುತ ನಡೆಯುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಸಿಎಂ ಮಮತಾ ಬ್ಯಾನರ್ಜಿ ವ್ಹೀಲ್ ಚೇರಿನಲ್ಲೇ ಕುಳಿತು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣಾ ರ್ಯಾಲಿಗಳಲ್ಲಿ ಬ್ಯಾಂಡೇಜ್ ಸುತ್ತಿದ ಕಾಲಿನಲ್ಲಿ ಪ್ರತ್ಯಕ್ಷವಾಗುತ್ತಿರುವ ದೀದಿ, ಪ್ರತಿಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ, ದೀದಿ ಕಾಲಿಗೆ ನಿಜವಾಗಿಯೂ ಪೆಟ್ಟಾಗಿದೆಯಾ ಎನ್ನುವ ಅನುಮಾನ ಇದೀಗ ಕೇಳಿ ಬಂದಿದೆ. ಇದಕ್ಕೆ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ.
ಹೌದು, ಬಿಜೆಪಿ ನಾಯಕರಾದ ತೇಜೀಂದರ್ ಬಗ್ಗಾ, ಪ್ರಣಯ್ ರಾಯ್, ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಸೇರಿದಂತೆ ಹಲವರು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ದೀದಿ,ಅರಾಮಾಗಿ ತಮ್ಮ ಕಾಲು ಅಲುಗಾಡಿಸಿದ್ದಾರೆ. ವ್ಹಿಲ್ ಚೇರ್ ಮೇಲೆ ಕುಳಿತಿರುವ ಮಮತಾ ತಮ್ಮ ಗಾಯಗೊಂಡ ಕಾಲನ್ನು, ನೋವಿನ ಅರಿವಿಲ್ಲದೇ ಅತ್ತಿತ್ತ ಅಲುಗಾಡಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಸಹಾನುಭೂತಿ ಗಿಟ್ಟಿಸಿಕೊಳ್ಳಲು ಗಿಮಿಕ್ ?
ಕೆಲ ದಿನಗಳ ಹಿಂದೆ ನಂದಿಗ್ರಾಮದಲ್ಲಿ ನಡೆದ ಗಲಾಟೆ ವೇಳೆ ಮಮತಾ ಅವರ ಕಾಲಿಗೆ ಪೆಟ್ಟಾಗಿತ್ತು. ಈ ಕೃತ್ಯಕ್ಕೆ ಕಾರಣ ಬಿಜೆಪಿ ಗೂಂಡಾಗಳು ಎಂದು ದೀದಿ ದೂರಿದ್ದರು. ಘಟನಾ ನಂತರದ ದಿನಗಳಲ್ಲಿ ಅವರು ವ್ಹೀಲ್ ಚೇರ್ ಮೇಲೆ ಕುಳಿತೇ ರೋಡ್ ಶೋ ಹಾಗೂ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡರು. ಆದರೆ, ಸದ್ಯ ವೈರಲ್ ಆಗಿರುವ ವಿಡಿಯೋ ನೋಡಿದ ನೆಟ್ಟಗರು ದೀದಿ ನಡೆಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತದಾರರ ಸಹಾನುಭೂತಿ ಗಿಟ್ಟಿಸಿಕೊಳ್ಳಲು ಮಮತಾ ಆಡುತ್ತಿರುವ ನಾಟಕವಿದು,’ ಎಂದು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಟ್ವಿಟರ್ ನಲ್ಲಿ ಈ ವಿಡಿಯೋ ಶೇರ್ ಮಾಡಿರುವ ಸಿನಿಮಾ ನಿರ್ಮಾಪಕ ಅಶೋಕ ಪಂಡಿತ್, ಮಮತಾ ಅವರ ಮುರಿದ ಕಾಲು ಡಾನ್ಸ್ ಮಾಡಲು ಬಯಸುತ್ತಿದೆ ಎಂದು ಲೇವಡಿ ಮಾಡಿದ್ದಾರೆ.