ಬೆಂಗಳೂರು: ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನಲ್ಲಿ ಇರುವ ಐತಿಹಾಸಿಕ ಮಮದಾಪುರ ಕೆರೆಯನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪುನಶ್ಚೇತನಗೊಳಿಸಲು ಕೋಕಾಕೋಲಾ ಕಂಪನಿ ಮುಂದೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಶುಕ್ರವಾರ ಹೇಳಿದ್ದಾರೆ.
ಈ ಬಗ್ಗೆ ಕಂಪನಿಯ ಉನ್ನತಾಧಿಕಾರಿಗಳಾದ ಹಿಮಾಂಶು ಪ್ರಿಯದರ್ಶಿ ಮತ್ತು ಮುಕುಂದ್ ತ್ರಿವೇದಿ ಸಚಿವರನ್ನು ಇಲ್ಲಿ ಭೇಟಿ ಮಾಡಿ ಚರ್ಚಿಸಿದರು.
16ನೇ ಶತಮಾನದಲ್ಲಿ ಆದಿಲ್ ಶಾಹಿ ಸುಲ್ತಾನರ ಕಾಲದಲ್ಲಿ ನಿರ್ಮಿತವಾಗಿರುವ ಮಮದಾಪುರ ಕೆರೆಯು ರಾಜ್ಯದ ಅತಿದೊಡ್ಡ ಕೆರೆಗಳ ಪೈಕಿ ಒಂದಾಗಿದ್ದು, 674 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೋಕಾಕೋಲಾ ಕಂಪನಿಯು ಕೆರೆಗೆ ನೀರನ್ನು ಹೊತ್ತು ತರುವ ಮುಖ್ಯ ನಾಲೆಯ ಹೂಳೆತ್ತಿ, ಬಾಂದಾರವನ್ನು ನಿರ್ಮಿಸಲಿದೆ. ಜೊತೆಗೆ ಕೆರೆಯ ಏರಿ ಬಲಪಡಿಸುವಿಕೆ, ಬೇಲಿ, ಪಾದಚಾರಿ ಮಾರ್ಗ ಮತ್ತು ಮಕ್ಕಳು ಆಟವಾಡುವ ಜಾಗವನ್ನು ಮಾಡಿಕೊಡಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೆರೆಯ ಸುತ್ತಮುತ್ತ ಹಸಿರಿನಿಂದ ತುಂಬಿರುವ 1,654 ಎಕರೆ ಅರಣ್ಯವಿದೆ. ಕೆರೆ ಪುನಶ್ಚೇತನದ ಬಳಿಕ ಈ ಸ್ಥಳವು ಪ್ರವಾಸಿ ಆಕರ್ಷಣೆಯ ತಾಣವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.