ನಿರ್ದೇಶಕ, ನಟ ಮೋಹನ್ ಖುಷಿಯಾಗಿದ್ದಾರೆ. ಅವರ ಖುಷಿಗೆ ಕಾರಣ ಮಾಮ ಎಂದರೆ ನೀವು ನಂಬಲೇಬೇಕು. ಯಾವ ಮಾಮ ಎಂದರೆ “ಹಲೋ ಮಾಮ’ ಎನ್ನಬೇಕು. “ಬಿಗ್‌ಬಾಸ್’ಗೆ ಹೋಗಿ ಬಂದ ನಂತರ ಮೋಹನ್ “ಹಲೋ ಮಾಮ’ ಎಂಬ ಸಿನಿಮಾ ಆರಂಭಿಸಿದ್ದರು. ಈಗ ಆ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಬಾರಿ ಚಿತ್ರ ಮೋಹನ್ ಮುಖದಲ್ಲಿ ನಗುಮೂಡಿಸಿದೆ.
ಚಿತ್ರ ಬಿಡುಗಡೆಗೆ ಮುನ್ನವೇ ಬಳ್ಳಾರಿ ಹಾಗೂ ಚಿತ್ರದುರ್ಗದ ವಿತರಣೆ ಮಾಡಲು ವಿತರಕರೊಬ್ಬರು ಮುಂದೆ ಬಂದರೆ, ಇತ್ತೀಚೆಗೆ ಸಿನಿಮಾದ ನೋಡಿದ ಭೋಗೇಂದ್ರ ಅವರು ಕೂಡಾ ಸಿನಿಮಾ ವಿತರಣೆ ಮಾಡಲು ಮುಂದಾಗಿದ್ದಾರೆ. “ನಾನು ಈ ಹಿಂದೆ “ಮಳೆ ನಿಲ್ಲುವವರೆಗೆ’ ಎಂಬ ಸಿನಿಮಾ ಮಾಡಿದ್ದೆ. ಆ ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆ ಬಂದರೂ ಚಿತ್ರ ಜನರಿಗೆ ತಲುಪದೇ ಸೋತು ಹೋಯಿತು.
ಸಿನಿಮಾ ಯಾಕ್ ಸೋತಿತು ಎಂದು ಅನೇಕರು ಕೇಳಿದಾಗ, ಆ ಸಿನಿಮಾದ ಹಿಂದೆ ಒಬ್ಬ ಕೆಟ್ಟ ನಿರ್ಮಾಪಕನಿದ್ದ ಎಂದಿದ್ದೆ. ಏಕೆಂದರೆ ಆ ಕೆಟ್ಟ ನಿರ್ಮಾಪಕನೇ ನಾನು. ಆದರೆ ಈ ಬಾರಿ “ಹಲೋ ಮಾಮ’ ವಿಷಯದಲ್ಲಿ ಖುಷಿಯಾಗಿದ್ದೇನೆ. ಭೋಗೇಂದ್ರ ಅವರು ಸಿನಿಮಾ ನೋಡಿ ವಿತರಣೆ ಮಾಡಲು ಮುಂದೆ ಬಂದಿದ್ದಾರೆ. ನನ್ನ ಗಾಡ್‌ಫಾದರ್ ಬಿ.ಎನ್.ಗಂಗಾಧರ್ ಅವರಿಗೆ ಸಿನಿಮಾ ತೋರಿಸಿದ್ದಾರೆ.
ಈ ಸಿನಿಮಾದಿಂದ ಕಳೆದುಕೊಳ್ಳುವುದಿಲ್ಲ ಎಂಬ ನಂಬಿಕೆ ಇದೆ’ ಎಂದು ಖುಷಿಯಿಂದ ಹೇಳುತ್ತಾರೆ ಮೋಹನ್. ಮೋಹನ್ “ಬಿಗ್ ಬಾಸ್’ಗೆ ಹೋಗಿ ಬಂದ ನಂತರ ಅನೇಕರು, “ನಿಮ್ಮನ್ನು ಸೀರಿಯಸ್ ಪಾತ್ರಗಳಲ್ಲಿ ನೋಡೋಕೆ ನಮಗೆ ಇಷ್ಟವಿಲ್ಲ, ಏನಾದರೂ ಕಾಮಿಡಿ ಪ್ರಯತ್ನಿಸಿ ಎಂದರಂತೆ. ಅದರ ಪರಿಣಾಮವಾಗಿಯೇ ಅವರು ಮಾಡಿದ್ದು “ಹಲೋ ಮಾಮ’.
“ಇಲ್ಲಿ ನವಿರಾದ ಹಾಸ್ಯ, ತುಂಟತನ ಹಾಗೂ ಸ್ವಲ್ಪ ಮಟ್ಟಿನ ಡಬಲ್ ಮೀನಿಂಗ್ ಕೂಡಾ ಇದೆ. ಇಂದಿನ ಯೂತ್ಸ್ಗೆ ಇಷ್ಟವಾಗುವಂತಹ ಸಿನಿಮಾ ಮಾಡಿದ್ದೇನೆ’ ಎಂಬುದು ಮೋಹನ್ ಮಾತು. ಚಿತ್ರದಲ್ಲಿ ಅರವಿಂದ್ ಕೂಡಾ ನಟಿಸಿದ್ದು, ಸೀರಿಯಸ್ ಪಾತ್ರಗಳನ್ನು ಮಾಡುತ್ತಿದ್ದ ಅರವಿಂದ್, ಮೊದಲ ಬಾರಿಗೆ ಈ ಸಿನಿಮಾದಲ್ಲಿ ಕಾಮಿಡಿ ಮಾಡಿದ್ದಾರಂತೆ.
ಚಿತ್ರದಲ್ಲಿ ನಟಿಸಿರುವ ಸಾಂಪ್ರತ ಕೂಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಚಿತ್ರವನ್ನು ಚಂದ್ರಶೇಖರ್ ನಿರ್ಮಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಬೇಕೆಂದು ಬ್ಯಾನರ್ ಹುಟ್ಟುಹಾಕಿ ಕಾಯುತ್ತಿದ್ದ ಅವರ ಆಸೆ “ಹಲೋ ಮಾಮ’ ಮೂಲಕ ಈಡೇರಿದೆ. ಚಿತ್ರ ಮೇ 11 ರಂದು ತೆರೆಕಾಣುವ ಸಾಧ್ಯತೆ ಇದೆ.