Advertisement

ಮೊಬೈಲ್‌ ಬ್ಯಾಂಕಿಂಗ್‌ಗೆ ಮಾಲ್ವೇರ್‌

07:31 AM May 15, 2020 | mahesh |

ನವದೆಹಲಿ: ನಿಮ್ಮಲ್ಲಿ ಆ್ಯಂಡ್ರಾಯ್ಡ್ ಮೊಬೈಲ್‌ ಇದೆಯೇ, ನೀವು ಮೊಬೈಲ್‌ ಬ್ಯಾಂಕಿಂಗ್‌ ಬಳಕೆದಾರರೇ? ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮ ಖಾತೆಗೆ ಕನ್ನ ಬೀಳುವ ಸಾಧ್ಯತೆಯಿದೆ.
ಇವೆಂಟ್‌ ಬೋಟ್‌ ಎಂಬ ಮೊಬೈಲ್‌ ಬ್ಯಾಂಕಿಂಗ್‌ ಮಾಲ್ವೇರ್‌ ಒಂದು ಇತ್ತೀಚೆಗೆ ಸೈಬರ್‌ ಸ್ಪೇಸ್‌ನಲ್ಲಿ ಸಕ್ರಿಯವಾಗಿದ್ದು, ಭಾರತದ ಆ್ಯಂಡ್ರಾಯ್ಡ್ ಫೋನ್‌ ಬಳಕೆದಾರರ ವೈಯಕ್ತಿಕ ಹಣಕಾಸಿನ ಮಾಹಿತಿಯನ್ನು ಕದಿಯುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಫೆಡರಲ್‌ ಸೈಬರ್‌ ಸೆಕ್ಯೂರಿಟಿ ಸಂಸ್ಥೆಯೇ ಹೊರಹಾಕಿದೆ.

Advertisement

“ಟ್ರೋಜನ್‌ ವೈರಸ್‌ ನಿಮಗೆ ಅರಿವಿಲ್ಲದಂತೆಯೇ ಕಣ್ಣಿಗೆ ಮಣ್ಣೆರಚಿ ಹಣಕಾಸು ಮಾಹಿತಿಯನ್ನು ಕದಿಯುತ್ತಿದೆ’ ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಟ್ರೋಜನ್‌ ವೈರಸ್‌ ಥರ್ಡ್‌ ಪಾರ್ಟಿ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡುವಂಥ ಸೈಟ್‌ಗಳನ್ನು ಬಳಸಿಕೊಂಡು ಮೈಕ್ರೋಸಾಫ್ಟ್ ವರ್ಡ್‌, ಅಡೋಬೆ ಪ್ಲ್ಯಾಶ್‌ ಹಾಗೂ ಇತರೆ ಅಪ್ಲಿಕೇಷನ್‌ಗಳಂತೆ ಸೋಗು ಹಾಕಿ ಗೊತ್ತೇ ಇಲ್ಲದಂತೆ ನಿಮ್ಮ ಮೊಬೈಲ್‌ ಫೋನ್‌ನೊಳಕ್ಕೆ ನುಸುಳುತ್ತದೆ. ಗ್ರಾಹಕರ ಹಣಕಾಸು ಆ್ಯಪ್‌ಗ್ಳಲ್ಲಿನ ದತ್ತಾಂಶಗಳನ್ನು ಕದಿಯುವ, ಎಸ್‌ಎಂಎಸ್‌ ಸಂದೇಶಗಳನ್ನು ಓದುವ ಮತ್ತು ಛೇದಿಸುವ ಸಾಮರ್ಥ್ಯವನ್ನು ಈ ಮಾಲ್ವೇರ್‌ ಹೊಂದಿದೆ.

ಇವೆಂಟ್‌ ಬೋಟ್‌ ಸದ್ಯಕ್ಕೆ ಅಮೆರಿಕ ಮತ್ತು ಐರೋಪ್ಯ ಮೂಲದ ಬ್ಯಾಂಕಿಂಗ್‌ ಆ್ಯಪ್ಲಿಕೇಷನ್‌ಗಳು, ಹಣ ವರ್ಗಾವಣೆ ಸೇವೆಗಳು, ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳು, ಇತರ ಹಣಕಾಸು ಸಂಬಂಧಿ ಆ್ಯಪ್ಲಿಕೇಷನ್‌ ಸೇರಿದಂತೆ ಸುಮಾರು 200 ವಿವಿಧ ಆ್ಯಪ್ಲಿಕೇಷನ್‌ಗಳನ್ನು ಟಾರ್ಗೆಟ್‌ ಮಾಡಿದೆ. ಈವರೆಗೂ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇವೆಂಟ್‌ ಬೋಟ್‌ ಕಾಣಸಿಕ್ಕಿಲ್ಲ. ಆದರೆ, ಅದು ಮೊಬೈಲ್‌ ಫೋನ್‌ನ ನೈಜ ಅಪ್ಲಿಕೇಷನ್‌ ನ ಸೋಗಿನಲ್ಲಿ ಕಾಣಿಸಿಕೊಂಡು ಗ್ರಾಹಕರನ್ನು ಯಾಮಾರಿಸುವ ಸಾಧ್ಯತೆ ಅಧಿಕವಾಗಿದೆ ಎಂದು ಭಾರತದ ಕಂಪ್ಯೂಟರ್‌ ತುರ್ತು
ಪ್ರತಿಕ್ರಿಯೆ ತಂಡ(ಸಿಇಆರ್‌ ಟಿ- ಇಂಡಿಯಾ) ಹೇಳಿದೆ. ಅಲ್ಲದೆ, ಯಾವುದೇ ಕಾರಣಕ್ಕೂ ವಿಶ್ವಾಸಾರ್ಹವಲ್ಲದ ಮೂಲಗಳಿಂದ, ಅಪರಿಚಿತ ವೆಬ್‌ ಸೈಟ್‌, ಲಿಂಕ್‌ಗಳಿಂದ ಆ್ಯಪ್ಲಿಕೇಷನ್‌
ಗಳನ್ನು ಡೌನ್‌ಲೋಡ್‌ ಅಥವಾ ಇನ್‌ಸ್ಟಾಲ್‌ ಮಾಡಿಕೊಳ್ಳಬೇಡಿ. ಗೂಗಲ್‌ ಪ್ಲೇಸ್ಟೋರ್‌ನಿಂದ ಕೂಡ ಯಾವುದೇ ಆ್ಯಪ್‌ ಡೌನ್‌ಲೋಡ್‌ ಮಾಡುವ ಮುನ್ನ ಅವುಗಳ ವಿವರವನ್ನು ಪರಿಶೀಲಿಸಿ, ಎಷ್ಟು ಡೌನ್‌ ಲೋಡ್‌ ಆಗಿದೆ, ಬಳಕೆದಾರರು ಏನನ್ನುತ್ತಾರೆ, ಗ್ರಾಹಕರ ಪ್ರತಿಕ್ರಿಯೆಯೇನು ಎಂಬ ಮಾಹಿತಿಯನ್ನು ಸೂಕ್ಷ್ಮವಾಗಿ ಓದಿಕೊಂಡೇ ಡೌನ್‌ಲೋಡ್‌ ಮಾಡಿ ಎಂದು ಸಿಇಆರ್‌ಟಿ
ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next