Advertisement

ಸರ್ಕಾರಿ ಜಾಗದಲ್ಲಿ ಮನೆ, ಶೆಡ್‌ ನಿರ್ಮಾಣ; ತೆರವಿಗೆ ತಾಕೀತು

05:19 PM Jan 23, 2020 | Naveen |

ಮಾಲೂರು: ಆಡಳಿತಾಧಿಕಾರಿಯೂ ಆದ ಎಸಿ ಸೋಮಶೇಖರ್‌ ಪುರಸಭೆಗೆ ದಿಢೀರ್‌ ಭೇಟಿ ನೀಡಿ, ಸಾರ್ವಜನಿಕರ ದೂರಿನ ಅನ್ವಯ ಅಕ್ರಮಗಳ ತನಿಖೆಗೆ ಆದೇಶ ಹೊರಡಿಸಿದರು. ಈ ವೇಳೆ ಜನರು ನೀಡಿದ್ದ ದೂರಿನ ಮೇಲೆ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಕೆಲ ಬಡಾ ವಣೆಯಲ್ಲಿನ ಸಿಎ ನಿವೇಶನವನ್ನು ಅಕ್ರಮ ಖಾತೆ ಮಾಡಿ, ಪರಭಾರೆ ಮಾಡಿರುವುದರ ಜೊತೆಗೆ ಕೆಲವು ಪ್ರಭಾವಿಗಳು ಸರ್ಕಾರಿ ಜಾಗ ಅತಿಕ್ರಮಣ ಮಾಡಿ
ಮನೆ, ಶೆಡ್‌ ನಿರ್ಮಿಸಿ ಕೊಂಡಿ ರುವುದಾಗಿ ದೂರು ಬಂದಿವೆ ಎಂದು ಹೇಳಿದರು.

Advertisement

ಮೂರು ಪ್ರಕರಣ ಇತ್ಯರ್ಥಪಡಿಸಿ: ಕೆಲವು ಖಾಸಗಿ ವ್ಯಕ್ತಿಗಳು 9000 ಚದರ ಅಡಿಯಷ್ಟು
ಸರ್ಕಾರಿ ಜಾಗದಲ್ಲಿ ಶೆಡ್‌ ನಿರ್ಮಿಸಿಕೊಂಡು, ವಹಿವಾಟು ನಡೆಸುತ್ತಿರುವುದಾಗಿ, ಮುಖ್ಯಾಧಿಕಾರಿಗಳ ವಸತಿ ಗೃಹವನ್ನೂ ಖಾಸಗಿ ವ್ಯಕ್ತಿಯೊಬ್ಬರು ಸ್ವಾಧೀನ ಪಡಿಸಿಕೊಂಡು ಶೆಡ್‌ ನಿರ್ಮಿಸಿದ್ದಾರೆ ಎಂದು ಜನರು ದೂರು ನೀಡಿದ್ದಾರೆ. ಈ ಮೂರು ಪ್ರಕರಣಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಪುರಸಭಾ ಮುಖ್ಯಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ತೆರವು: ಈ ಕೂಡಲೇ ಎರಡು ಅಧಿಕಾರಿಗಳ ತಂಡ ರಚಿಸಿ ಅಕ್ರಮ ಸಿಎ ನಿವೇಶನಗಳ
ಪರಭಾರೆ, ಸ್ವಾಧೀನದ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ತಾವು ಸಹ ಅಕ್ರಮ ಶೆಡ್‌ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದರು.
ವರದಿ ಮಂಡಿಸಿ: ಅದೇ ರೀತಿಯಲ್ಲಿ ಮಾಲೂರು ಪಟ್ಟಣದಲ್ಲಿ ಕಂದಾಯ ಇಲಾಖೆಯ ಕೆಲವು ಭೂಮಿಗಳಲ್ಲಿ ಅಕ್ರಮ ಶೆಡ್‌ಗಳ ನಿರ್ಮಾಣ, ರಾಜಕಾಲುವೆಗಳ ಒತ್ತುವರಿ, ಪಟ್ಟಣದ ಪ್ರಮುಖ ರಸ್ತೆಗಳ ಚರಂಡಿಗಳ ಮೇಲೆ ರಾತ್ರೋರಾತ್ರಿ ಪೆಟ್ಟಿಗೆ ಅಂಗಡಿ ಇಟ್ಟಿರುವುದು ಕಂಡು ಬಂದಿದೆ. ಮೂರು ದಿನಗಳ ಒಳಗಾಗಿ ವರದಿ ಮಂಡಿಸಿ, ತೆರವು ಮಾಡುವುದಾಗಿ ತಿಳಿಸಿದರು.
ಬೀಗ ಮುದ್ರೆ: ಪುರಸಭೆಗೆ ಬಾಡಿಗೆ ಮತ್ತು ತೆರಿಗೆ ಪಾವತಿಸದ ಕಾರಣ, 25 ಅಂಗಡಿಗಳಿಗೆ ಬೀಗ ಹಾಕಲಾಗಿದೆ. ಇನ್ನೂ ಕೆಲವು ಕಲ್ಯಾಣ ಮಂಟಪಗಳು, ಉದ್ಯಮಗಳು, ತೆರಿಗೆ ಬಾಕಿ ಉಳಿಸಿ ಕೊಂಡಿರುವ ಕಾರಣ, ಶೀಘ್ರ ಬೀಗ ಮುದ್ರೆ ಹಾಕುವ ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದರು.

ಕಂದಾಯ ಇಲಾಖೆಯಿಂದ ತಾಲೂಕಿನ ಆರು ಗ್ರಾಮಗಳನ್ನು ಪೋಡಿ ಮುಕ್ತ ಮಾಡಲು ಮುಂದಾಗಿದ್ದು, ಕೆಲವು ರಾಜಕಾಲುವೆಗಳ ಒತ್ತುವರಿ ತೆರವಿಗೂ ಕಠಿಣ ಕ್ರಮ ಅನುಸರಿಸಲಾಗುತ್ತಿದೆ. ಅದರಂತೆ ಬೈರನಹಳ್ಳಿಯ ರಾಜಕಾಲುವೆ, ಕೆಲವು ಗೋಕುಂಟೆಗಳ ಒತ್ತುವರಿ ತೆರವಿಗೆ ಆದೇಶ ನೀಡಲಾಗಿದೆ ಎಂದು ಹೇಳಿದರು. ಖಾಸಗಿ ಇಡುವಳಿ
ದಾರ ರೈತರ ಪಿ ನಂಬರ್‌ ತೆಗೆಯುವ ಕಾರ್ಯವಾಗಿ ತಾಲೂಕಿನ 90 ಪ್ರಕರಣ ಪಟ್ಟಿ ಮಾಡಿ ಸರ್ವೆ ಇಲಾಖೆಯ ಅಧಿಕಾರಿ ಗಳೊಂದಿಗೆ ದುರಸ್ತಿ ಮಾಡಿಸಲಾಗುತ್ತಿದೆ ಎಂದರು. ಮುಖ್ಯಾಧಿಕಾರಿ ಪ್ರಸಾದ್‌ ಮಾತನಾಡಿ, ಎಸಿ ಆದೇಶದಂತೆ ಎಲ್ಲಾ ಅಕ್ರಮಗಳ ತನಿಖೆ ನಡೆಸಿ ಮೂರು ದಿನಗಳ ಒಳಗೆ ವರದಿ ಮಂಡಿಸ ಲಾಗುವುದು. ಅಕ್ರಮಗಳ ತೆರವಿಗೆ ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next