ಮಾಲೂರು: ಮೂರು ಕಾಸಿನ ಅಸೆಗೆ ಹನ್ನೆರಡು ಕಾಸು ಕಳೆದುಕೊಂಡರು ಎನ್ನುವ ಪರಿಸ್ಥಿತಿ ತಾಲೂಕಿನ ಮುಸ್ಲಿಂ ಸಮುದಾಯದ ಪ್ರತಿಷ್ಠಿತ ವ್ಯಕ್ತಿಗಳ ಸ್ಥಿತಿಯಾಗಿದೆ. ಬಹುದಿನಗಳಿಂದ ತಾಲೂಕಿನ ಮುಸ್ಲಿಮರಿಗಾಗಿ ಐಎಂಎ ಮಾಲಿಕ ಕಟ್ಟಿಸುತ್ತಿದ್ದ ಶಾದಿಮಹಲ್ ಕಟ್ಟಡವೂ ಈಗ ನನೆಗುದಿಗೆ ಬಿದ್ದಿದ್ದು, ಹಣ ಹೂಡಿಗೆ ಮಾಡಿದ್ದ ಜನ ಆತಂಕದಲ್ಲಿದ್ದಾರೆ.
ಮಾಜಿ ಶಾಸಕ ಎ.ನಾಗರಾಜು ಅವರ ಹಾದಿಯಾಗಿ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿವರೆಗೂ ಶಾದಿ ಮಹಲ್ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯಕ್ಕೆ ನಿವೇಶನ ನೀಡುವುದಾಗಿ ಭರವಸೆ ಕೊಟ್ಟು ಕಾಲ ಕಳೆದರು. ನಂತರ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಪಟ್ಟಣ ಕುಂಬೇಶ್ವರ ಸ್ವಾಮಿ ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡಿದ್ದ ವಕ್ಫ್ ಬೋರ್ಡ್‌ಗೆ ಸೇರಿದ್ದ 1.5 ಎಕರೆಯನ್ನು ಮಾತುಕತೆ ಮೂಲಕ ವಿವಾದ ಬಗೆಹರಿಸಿ, ಬೆಂಗಳೂರಿನ ಶಿವಾಜಿನಗರದಲ್ಲಿನ ಐಎಂಎ ಜುವೆಲರ್ ಮಾಲಿಕರಿಗೆ ವಹಿಸಿದ್ದರು.
ಬರಸಿಡಿಲು: ನಂತರ 6 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಶಾದಿ ಮಹಲ್ ನಿರ್ಮಿಸುವ ಜೊತೆಗೆ 6 ವರ್ಷಗಳ ಕಾಲ ನಿರ್ವಹಣೆಯನ್ನು ನಡೆಸುವ ಒಡಂಬಡಿಗೆ ಮಾಡಿಕೊಳ್ಳಲಾಗಿತ್ತು. ಪರಿಣಾಮ 4 ಕೋಟಿ ರೂ. ವೆಚ್ಚದಲ್ಲಿ ಶಾದಿ ಮಹಲ್ ನಿರ್ಮಾಣವಾಗಿ ಶೇ.80 ಕೆಲಸ ಪೂರ್ಣವಾಗಿದೆ. ಇಂತಹ ಸಮಯದಲ್ಲಿ ತಾಲೂಕಿನ ಜನತೆ ಪಾಲಿಗೆ ಐಎಂಎ ವಂಚನೆ ಪ್ರಕರಣ ಬರಸಿಡಿಲು ಬಡಿದಂತಾಗಿದೆ.
ಮಹಲೂ ಇಲ್ಲ, ಹಣವೂ ಇಲ್ಲ: ಶಾದಿಮಹಲ್ ನಿರ್ಮಾಣದ ಸುದ್ದಿ ಹರಡುತ್ತಿದ್ದಂತೆ ತಾಲೂಕಿನ ಮುಸ್ಲಿಂ ಸಮುದಾಯದ ಅನೇಕ ಸ್ಥಿತಿವಂತರು ತಮ್ಮ ಸಮುದಾಯದ ಸಂಸ್ಧೆ ಎನ್ನುವ ಅಸೆಯ ಜೊತೆಗೆ ಮಾಲೂರು ಜನತೆಗೆ ಶಾದಿ ಮಹಲ್ ಕಟ್ಟಿಸುತ್ತಿರುವ ಉತ್ಸಾಹದಲ್ಲಿ ತಮ್ಮಲ್ಲಿದ್ದ ಹಣವನ್ನು ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದರು. ತಾಲೂಕಿನ ಕೊಂಡಶೆಟ್ಟಿಹಳ್ಳಿ, ಸೀತನಾಯಕನಹಳ್ಳಿ , ಮಾಸ್ತಿ, ಟೇಕಲ್ ಮತ್ತು ಮಾಲೂರು ಪಟ್ಟಣ ಸೇರಿ ವಿವಿಧ ಕಡೆಗಳಿಂದ 50 ಕೋಟಿ ರೂ.ಗಿಂತ ಮಿಗಿಲಾದ ಹಣ ಐಎಂಎನಲ್ಲಿ ಠೇವಣಿಯಾಗಿ ಇಟ್ಟಿರುವ ಸುದ್ದಿಗಳು ಹೊರಬರಲು ಅರಂಭವಾಗಿದೆ. ಕೆಲವು ಮಂದಿ ಪ್ರತಿಷ್ಠಿತ ವ್ಯಕ್ತಿಗಳು ಹಣವನ್ನು ಹೂಡಿಕೆ ಮಾಡಿದ್ದರೂ ಬಿಗುಮಾನದಿಂದ ಹೇಳಿಕೊಳ್ಳಲು ಸಂಕುಚಿತರಾಗಿ ನೋವನ್ನು ಅನುಭವಿಸುತ್ತಿದ್ದಾರೆ.
ತಾಲೂಕಿನಲ್ಲಿ ಬಿಸಿ ಬಿಸಿ ಚರ್ಚೆ: ಪ್ರಸ್ತುತ ಶಾದಿ ಮಹಲ್ ಕಾಮಗಾರಿ ಸಂಪೂರ್ಣ ನಿಂತುಹೋಗಿದ್ದು, ಇನ್ನೂ 40 ಲಕ್ಷ ರೂ.ನ ಕಾಮಗಾರಿ ಬಾಕಿ ಉಳಿದಿದೆ. 2017ರಲ್ಲಿ ಅಂದಿನ ಶಾಸಕ ಮಂಜುನಾಥ್‌ಗೌಡ ಕುಂಬಾರಪೇಟೆಯಲ್ಲಿ ಮೀಸಲಿಟ್ಟಿದ್ದ ವಕ್ಫ್ ಬೋರ್ಡನ 1.5 ಎಕರೆ ಜಮೀನನಲ್ಲಿ ಮುಸ್ಲಿಮರಿಗೆ ಶಾದಿ ಮಹಲ್ ನಿರ್ಮಿಸಿಕೊಡುವಂತೆ ರಾಜಕೀಯ ವಲಯದ ಸ್ನೇಹಿತರ ಮೂಲಕ ಮನ್ಸೂರ್ ಖಾನ್‌ರನ್ನು ಭೇಟಿ ಮಾಡಿದ್ದರು. 2017ರಲ್ಲಿ ಶಾದಿ ಮಹಲ್ ಕಾಮಗಾರಿ ಪ್ರಾರಂಭಿಸಲಾಗಿತ್ತು. ನಂತರ ಶಾಸಕ ಮಂಜುನಾಥ್‌ಗೌಡ ವಿಧಾನಸಭೆ ಚುನಾವಣೆಯಲ್ಲಿ ಸೋಲುತ್ತಿದ್ದಂತೆ ಇಲ್ಲಿನ ಶಾದಿ ಮಹಲ್ ಕಾಮಗಾರಿ ಸಹ ನಿಂತು ಹೋಗಿತ್ತು. ನಂತರ ಆಯ್ಕೆಯಾದ ಶಾಸಕ ಕೆ.ವೈ.ನಂಜೇಗೌಡ, ಸಚಿವ ಜಮೀರ್‌ಅಹಮದ್ ಅವರ ಮೂಲಕ ದಾನಿ ಮಸ್ಸೂರ್‌ಖಾನ್‌ರನ್ನು ಭೇಟಿ ಮಾಡಿ ಶಾದಿಮಹಲ್ ಪೂರ್ಣಗೊಳಿಸಿ ಕೊಡುವಂತೆ ಕೋರಿದ್ದರು. ಮತ್ತೆ ಕಾಮಗಾರಿ ಪ್ರಾರಂಭಿಸಿದ್ದ ಮನ್ಸೂರ್ ಖಾನ್, ಮೂರು ತಿಂಗಳಿಂದ ದಿಢೀರ್ ಆಗಿ ಕಾಮಗಾರಿ ನಿಲ್ಲಿಸಿದ್ದರು. ಇದರಿಂದಾಗಿ ತಾಲೂಕಿನ ಜನತೆ ಪಾಲಿಗೆ ಶಾದಿ ಮಹಲ್ನ ಕನಸ್ಸಿನ ಜೊತೆಗೆ ಕೂಡಿಟ್ಟ ಹಣವೂ ಇಲ್ಲದಂತಾಗಿದ್ದು, ಪಟ್ಟಣದಲ್ಲಿ ಬಿಸಿ ಬಿಸಿ ಚರ್ಚೆಗಳು ಆರಂಭವಾಗಿವೆ.