Advertisement

Malpe: ಸಮುದ್ರ ಪ್ರಕ್ಷುಬ್ಧ; ಸೆಪ್ಟೆಂಬರ್ 15ರ ಬಳಿಕವೂ ತೆರೆದುಕೊಳ್ಳದ ಮಲ್ಪೆ ಬೀಚ್‌

04:59 PM Sep 25, 2024 | Team Udayavani |

ಮಲ್ಪೆ: ಪ್ರವಾಸಿಗರ ಹಾಟ್‌ಸ್ಪಾಟ್‌ ಎಂದೇ ಕರೆಸಿಕೊಳ್ಳುವ ಮಲ್ಪೆ ಬೀಚ್‌ನಲ್ಲಿ ಜಲಸಾಹಸ ಕ್ರೀಡೆಗಳು ಇನ್ನೂ ಆರಂಭಗೊಳ್ಳದಿರುವುದು ಬಹುತೇಕ ಪ್ರವಾಸಿಗರ ನಿರಾಸೆಯಾಗಿದೆ.

Advertisement

ಮಲ್ಪೆ ಬೀಚ್‌ನಲ್ಲಿ ಮಳೆಗಾಲದಲ್ಲೂ ಜನ ಜಂಗುಳಿ ಇರುತ್ತದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಮಳೆಗಾಲದಲ್ಲಿ ಜಲಸಾಹಸ ಕ್ರೀಡೆ ಸೇರಿದಂತೆ ಇತರ ಚಟುವಟಿಕೆಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇರುತ್ತದೆ. ಇದೀಗ ಮಳೆಗಾಲ ಮುಗಿದಿದ್ದರಿಂದ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಸರಣಿ ರಜೆ ಮತ್ತು ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ತೀರ ಅಧಿಕವಾಗುತ್ತದೆ. ಆದರೆ ಇಲ್ಲಿ ಯಾವುದೇ ತರಹದ ಜಲಸಾಹಸ ಕ್ರೀಡೆಗಳು ಇನ್ನೂ ಆರಂಭಗೊಳ್ಳದಿರುವುದನ್ನು ಕಂಡು ಬಹುತೇಕ ಮಂದಿ ಪ್ರವಾಸಿಗರು ನಿರಾಸೆ ಗೊಂಡು ಹಿಂದಿರುಗುತ್ತಿದ್ದಾರೆ.

ನಿರ್ಬಂಧ ಜಾರಿಯಲ್ಲಿದೆ
ಮಳೆಗಾಲದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಡಳಿತ ಬೀಚ್‌ನಲ್ಲಿ ನಡೆಯುತ್ತಿರುವ ಜಲಸಾಹಸ ಕ್ರಿಡೆಗಳಿಗೆ ಮೇ 15ರಿಂದ ಸೆ. 15ರ ವರೆಗೆ ನಿಷೇಧ ಹೇರುತ್ತದೆ. ಸೆ. 16ರಿಂದ ಎಲ್ಲವೂ ಮುಕ್ತವಾಗಿರುತ್ತದೆ. ಆದರೆ ಈ ಬಾರಿ ಸಮುದ್ರದ ಪ್ರಕ್ಷುಬ್ದತೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಯಾವುದಕ್ಕೂ ಅನುಮತಿ ಲಭಿಸಿಲ್ಲ ಎನ್ನಲಾಗುತ್ತಿದೆ.

ವಾಟರ್‌ ನ್ಪೋಟ್ಸ್‌ಗಾಗಿಯೇ ಬರುವವರು
ಮಲ್ಪೆ ಬೀಚ್‌ನಲ್ಲಿ ನೀರಿಗಿಳಿದು ಆಟವಾಡಿ ಎಂಜಾಯ್‌ ಮಾಡೋದಕ್ಕೆ ಅಂತಾನೇ ರಾಜ್ಯ, ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಇಲ್ಲಿನ ಕಡಲ ತೀರಗಳಿಗೆ ಭೇಟಿ ನೀಡುತ್ತಾರೆ. ಜಲಸಾಹಸ ಕ್ರೀಡೆಗಳನ್ನು ಆಡೋದಕ್ಕೆ ಅಂತಾನೇ ದೂರದೂರುಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಮುಂದೆ ಸಾಲು ಸಾಲು ಹಬ್ಬಗಳು ಬರಲಿದ್ದು ಬರುವ ಜನರ ಸಂಖ್ಯೆಯೂ ಹೆಚ್ಚಾಗಲಿದೆ. ಜಲಸಾಹಸ ಕ್ರೀಡೆ ಆರಂಭಕ್ಕೆ ಮತ್ತಷ್ಟು ವಿಳಂಬವಾದರೆ ಪ್ರವಾಸಿಗರ ಸಂಖ್ಯೆ ಇಳಿಮುಖ ವಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.

ಜಿಲ್ಲಾಡಳಿತ ಮಲ್ಪೆ ಬೀಚ್‌ನಲ್ಲಿ ವಾಟರ್‌ ನ್ಪೋರ್ಟ್ಸ್ ಅನ್ನು ಅತೀ ಶೀಘ್ರದಲ್ಲಿ ಆಯೋಜಿಸುವಂತೆ ಪ್ರವಾಸಿಗರು ಆಗ್ರಹಿಸಿದ್ದಾರೆ..

Advertisement

ನೀರಿನಲ್ಲಿ ಮೋಜು ಮಸ್ತಿ
ಪ್ರಕೃತಿ ಸೌಂದರ್ಯವನ್ನು ಸವಿಯುವ ಆಸೆಯಿಂದ ರಾಜ್ಯಾದ್ಯಾಂತ ಪ್ರವಾಸಿಗರು ಉಡುಪಿ, ದ.ಕ. ಜಿಲ್ಲೆಗೆ ಹೆಚ್ಚಾಗಿ ಪ್ರವಾಸವನ್ನು ಆಯೋಜಿಸುತ್ತಾರೆ. ಉಡುಪಿಗೆ ಪ್ರವಾಸಕ್ಕೆ ಬರುವವರ ಮುಖ್ಯ ಗುರಿ ಮಲ್ಪೆ ಬೀಚ್‌, ಸೈಂಟ್‌ ಮೇರೀಸ್‌ ದ್ವೀಪ ನೋಡುವುದೇ ಆಗಿರುತ್ತದೆ. ಬೀಚ್‌ಗೆ ಬಂದ ಬಹುತೇಕ ಮಂದಿ ಇಲ್ಲಿ ವಾಟರ್‌ ನ್ಪೋರ್ಟ್ಸ್
ಆರಂಭಗೊಳ್ಳದಿರುವುದನ್ನು ಕಂಡು ಇಲ್ಲಿನ ಜೀವರಕ್ಷಕರ ಎಚ್ಚರಿಕೆಯ ಮಾತನ್ನು ಕಡೆಗಣಿಸಿ ಬೀಚ್‌ ದಂಡೆಗೆ ಹಾಕಿದ ತಡೆಬೇಲಿಯನ್ನು ದಾಟಿ ನೀರಿಗಿಳಿದು ಮೋಜು ಮಸ್ತಿಯಲ್ಲಿರುವುದು ಕಂಡು ಬಂದಿದೆ.

ಅಕ್ಟೋಬರ್‌ ಮೊದಲ ವಾರದಲ್ಲಿ ಆರಂಭ?
ಕಳೆದ ವರ್ಷ ಅ. 9ರಿಂದ ಬೀಚ್‌ನಲ್ಲಿ ವಾಟರ್‌ ನ್ಪೋರ್ಟ್ಸ್‌ ನಲ್ಲಿ ಆರಂಭಗೊಳಿಸಲಾಗಿದೆ. ಈ ಬಾರಿ ಬಿಟ್ಟು ಬಿಟ್ಟು ಬರುವ ಮಳೆ, ಪಾಕೃತಿಕ ವಾತಾವರಣದ ಅಸಮತೋಲನದಿಂದಾಗಿ ಸಮುದ್ರದಲ್ಲಿ ನೀರಿನ ಒತ್ತಡವೂ ಜಾಸ್ತಿಯಾಗಿದೆ. ಹಾಗಾಗಿ ಪ್ರವಾಸಿಗರ ಸುರಕ್ಷೆಯ ದೃಷ್ಟಿಯಿಂದ ಯಾವುದೇ ತರಹದ ಜಲಸಾಹಸ ಕ್ರೀಡೆಯನ್ನು ಆರಂಭಿಸಲು ಅವಕಾಶ ಕೊಟ್ಟಿಲ್ಲ. ಅಕ್ಟೊಬರ್‌ ತಿಂಗಳ ಮೊದಲ ವಾರದಲ್ಲಿ ಸಮುದ್ರದ ಪರಿಸ್ಥಿತಿಯನ್ನು ನೋಡಿಕೊಂಡು ವಾಟರ್‌ ಸೋರ್ಟ್ಸ್ ಆರಂಭಕ್ಕೆ ಅವಕಾಶವನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next