Advertisement

ಮಲ್ಪೆ: ಸೇತುವೆ ಬಳಿ ಬೈಕ್‌ ಇಟ್ಟು ನಾಪತ್ತೆ ನಾಟಕವಾಡಿದ್ದ ಯುವಕ ಪತ್ತೆ

12:30 AM Sep 28, 2022 | Team Udayavani |

ಮಲ್ಪೆ: ಮಲ್ಪೆ ಪಡುಕರೆ ಸೇತುವೆ ಬಳಿ ಬೈಕ್‌, ಚಪ್ಪಲಿ ಇರಿಸಿ, ನೀರಿಗೆ ಬಿದ್ದು ಕಣ್ಮರೆಯಾದ ನಾಟಕವಾಡಿದ ದಾವಣಗೆರೆಯ ಯುವಕ ಶಿವಪ್ಪ ನಾಯ್ಕ ಸೋಮವಾರ ದಾವಣಗೆರೆಯಲ್ಲಿ ಪತ್ತೆಯಾಗಿದ್ದಾನೆ.

Advertisement

ಕಟ್ಟಿಕೊಂಡವಳನ್ನು ಬಿಟ್ಟು ಇಟ್ಟುಕೊಂಡವಳೊಂದಿಗೆ ಸಂಸಾರ ನಡೆಸುವ ಉದ್ದೇಶದಿಂದ ಪೊಲೀಸರ ಹಾದಿ ತಪ್ಪಿಸಲು ನೀರಿನಲ್ಲಿ ಮುಳುಗಿ ನಾಪತ್ತೆ ನಾಟಕವಾಡಿದ್ದ ಎನ್ನಲಾಗಿದೆ. ಇದೀಗ ಪೋಲೀಸರು ಆತನನ್ನು ಪತ್ತೆ ಹಚ್ಚಿ ಸೋಮವಾರ ಮಲ್ಪೆ ಪೊಲೀಸ್‌ ಠಾಣೆಗೆ ಕರೆ ತಂದಿದ್ದಾರೆ.

6 ತಿಂಗಳ ಹಿಂದೆ ದಾವಣಗೆರೆಯ ಉತ್ಕಟಿ ತಾಂಡದ ಆಶಾ ಅವರನ್ನು ಪ್ರೀತಿಸಿ ಮದುವೆಯಾಗಿ ಮಲ್ಪೆ ಕೊಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಹೋರುವ ಕೆಲಸ ಮಾಡಿಕೊಂಡಿದ್ದು, ಇದರ ಮಧ್ಯೆ ಹೊಸಪೇಟೆ ಹರಪ್ಪನಹಳ್ಳಿಯ ಕಮಲಿಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದ. ಇದೇ ವಿಚಾರದಲ್ಲಿ ಕೆಲವು ದಿನಗಳಿಂದ ಕಟ್ಟಿ ಕೊಂಡ ಹೆಂಡತಿಯೊಂದಿಗೆ ವೈಮನಸ್ಸು ಹೊಂದಿ ಜಗಳಕ್ಕೂ ಕಾರಣವಾಗಿತ್ತು. ಕಮಲಿಯೂ ಕೂಡ ಮೀನುಗಾರಿಕೆ ಬಂದರಿನಲ್ಲಿ ಕೆಲಸ ಮಾಡುತ್ತಿದ್ದಳು.

ಈಶ್ವರ್‌ ಮಲ್ಪೆಯಿಂದ
ಹೊಳೆಯಲ್ಲಿ ಹುಡುಕಾಟ
ಸೆ. 23ರಂದು ಆತನ ಬೈಕ್‌ ಮತ್ತು ಚಪ್ಪಲಿಯು ಸೇತುವೆಯ ತಡೆಗೋಡೆಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈತ ಸೇತುವೆ ಕೆಳಗೆ ಬಿದ್ದಿದ್ದಾನೆ ಎಂಬ ಶಂಕೆಯಿಂದ ಪೊಲೀಸರ ವಿನಂತಿಯ ಮೇರೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಸ್ಕೂಬಾ ಧರಿಸಿ ಸುಮಾರು ಒಂದು ತಾಸು ನೀರಿನಲ್ಲಿ ಜಾಲಾಡಿದರೂ ಪತ್ತೆಯಾಗಲಿಲ್ಲ.

ಅನುಮಾನಗೊಂಡ ಪೊಲೀಸರು ತನಿಖೆಯನ್ನು ಮುಂದುವರಿಸಿ, ಆತನ ಮೊಬೈಲ್‌ ಆನ್‌ ಮಾಡಿದಾಗ ಕುಂಜಿಬೆಟ್ಟಿನ ಬ್ಯಾಂಕಿನಿಂದ 24 ಸಾವಿರ ರೂ. ಡ್ರಾ ಮಾಡಿದ ಮೆಸೇಜ್‌ ಬಂದಿತ್ತು. ಇದರ ಆಧಾರದಲ್ಲಿ ಆತ ಜೀವಂತ ಇದ್ದಾನೆಂದು ಪೊಲೀಸರಿಗೆ ತಿಳಿಯಿತು. ಆತನ ಇರುವಿಕೆಯನ್ನು ಸಂಬಂಧಿಕರ ನೆರವಿನಿಂದ ಮಾಹಿತಿ ಪಡೆದು ಆತನನ್ನು ಊರಿನಿಂದ ಇಲ್ಲಿಗೆ ಕರೆಸಿಕೊಳ್ಳಲಾಯಿತು.

Advertisement

ಹಾದಿ ತಪ್ಪಿಸಲು ಆಡಿದ್ದ ನಾಟಕ
ಆತನನ್ನು ಕರೆಸಿದ ಮಲ್ಪೆ ಪೊಲೀಸರು ವಿಚಾರಣೆ ನಡೆಸುವ ವೇಳೆ ತಾನು ಮಾಡಿದ್ದೆಲ್ಲವನ್ನು ಆತ ಬಾಯ್ಬಿಟ್ಟಿದ್ದಾನೆ. ಬೈಕ್‌ ಅಪಘಾತವಾಗಿ ಸೇತುವೆಯಿಂದ ಹೊಳೆಗೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ಬಿಂಬಿಸಿದ್ದಾನೆ. ಸೇತುವೆಯಲ್ಲಿ ಬೈಕ್‌ನ ಬ್ರೇಕ್‌ ಒತ್ತಿ, ಎಕ್ಸಲೇಟರ್‌ ಜಾಸ್ತಿ ಮಾಡಿ ಒಮ್ಮೆಲೆ ಬಿಟ್ಟಾಗ ಅದು ಸೇತುವೆ ತಡೆಗೋಡೆಗೆ ತಾಗಿ ಅಪಘಾತ ನಡೆದಂತೆ ಬಿಂಬಿಸಿ, ಆ ಬಳಿಕ ಕೋಳಿಯನ್ನು ಕೊಯ್ದು ಅದರ ರಕ್ತವನ್ನು ರಸ್ತೆ ಮೇಲೆ ಹರಿಸಿ ಅಪಘಾತವಾಗಿ ತಾನು ಹೊಳೆಗೆ ಎಸೆಯಲ್ಪಟ್ಟಿದ್ದೇನೆ ಎಂಬ ನಾಟಕವಾಡಿದ. ಒಂದು ಕಾಲಿನ ಮೆಟ್ಟು ಮತ್ತು ಮೊಬೈಲನ್ನು ಅಲ್ಲೇ ಬಿಟ್ಟಿದ್ದಾನೆ. ಆ ಬಳಿಕ ಉಡುಪಿಯ ಲಾಡ್ಜ್ನಲ್ಲಿ ಇದ್ದು ಅಂದು ರಾತ್ರಿ ಊರಿಗೆ ತೆರಳಿ ಸಂಬಂಧಿಕರ ಮನೆಯಲ್ಲಿ ತಂಗಿದ್ದೆನೆಂದು ಹೇಳಿದ್ದಾನೆ. ಇದೆಲ್ಲ ಜನರ ಹಾದಿ ತಪ್ಪಿಸಲು ಈತ ಮಾಡಿದ ನಾಟಕ ಎಂದು ಒಪ್ಪಿಕೊಂಡಿದ್ದಾನೆ. ಪೊಲೀಸರು ಈತನಿಗೆ ಮೊದಲ ಹೆಂಡತಿ ಜತೆ ಸಂಸಾರ ನಡೆಸುವಂತೆ ಬುದ್ದಿವಾದ ಹೇಳಿ ಕಳುಹಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next