Advertisement

Malpe: ವಿದ್ಯುತ್‌ ಕಡಿತ; ಮಂಜುಗಡ್ಡೆ ಸಿಗದೆ ಮೀನುಗಾರಿಕೆ ಉದ್ಯಮಕ್ಕೆ ಹೊಡೆತ!

04:01 PM Oct 29, 2024 | Team Udayavani |

ಮಲ್ಪೆ: ಮೀನುಗಾರಿಕಾ ಉದ್ಯಮಕ್ಕೆ ಪೂರಕವಾದ ಮಂಜುಗಡ್ಡೆ ಸ್ಥಾವರಗಳು ಇದೀಗ ವಿದ್ಯುತ್‌ ಕೊರತೆಯಿಂದಾಗಿ ನಲುಗುತ್ತಿದೆ. ಕಳೆದ 15 ದಿನಗಳಿಂದ ಆಗಾಗ ವಿದ್ಯುತ್‌ ಕಡಿತ ಗೊಳ್ಳುತ್ತಿರುವುದು ಮೀನಿಗೆ ಮಂಜುಗಡ್ಡೆ ಸಿಗದೆ ಮೀನುಗಾರಿಕೆಗೆ ಬಾರಿ ಹೊಡೆತ ಉಂಟಾಗಿದೆ.

Advertisement

ವಿದ್ಯುತ್‌ ಕಡಿತ ಎಲ್ಲರಿಗೆ ತೊಂದರೆ ನೀಡಿದರೂ, ಶೇ.80ರಷ್ಟು ವಿದ್ಯುತ್‌ ಬಳಕೆಯಾಗುವುದರಿಂದ ಮಂಜುಗಡ್ಡೆ ತಯಾರಿಕಾ ಘಟಕ ಹೆಚ್ಚು ತೊಂದರೆಯನ್ನು ಅನುಭವಿಸುತ್ತಿದೆ. ವಿದ್ಯುತ್‌ ಇರುವಾಗ ಗಡ್ಡೆ ಕಟ್ಟಿದ ಬ್ಲಾಕ್‌ಗಳು ವಿದ್ಯುತ್‌ ಹೋಗುತ್ತಿದ್ದಂತೆ ಕರಗುತ್ತಿವೆ. ಇದರಿಂದ ವಿದ್ಯುತ್‌ ಬಳಕೆಯು ಜಾಸ್ತಿಯಾಗುತ್ತದೆ. ಮಂಜುಗಡ್ಡೆ ತಯಾರಿಸಲು ಸರಕಾರ ಪ್ರತೀ ಯುನಿಟ್‌ಗೆ 1.75 ರೂ. ರಿಯಾಯಿತಿ (ವರ್ಷಕ್ಕೆ 2 ಲಕ್ಷ ಯುನಿಟ್‌ ವರೆಗೆ) ನೀಡುತ್ತಿದೆ. ಆದರೆ ಇದೀಗ ಪ್ರತಿದಿನ 4 ಗಂಟೆ ವಿದ್ಯುತ್‌ ಕಡಿತಗೊಳ್ಳುವುದರಿಂದ ತಯಾರಾದ ಮಂಜುಗಡ್ಡೆಯಲ್ಲಿ ಶೇ.50ರಷ್ಟು ಕರಗಿಹೋಗುತ್ತದೆ. ಇದನ್ನು ಮತ್ತೆ ಬ್ಲಾಕ್‌ ಆಗಿ ಪರಿವರ್ತಿಸಲು 4 ಗಂಟೆ ವಿದ್ಯುತ್‌ ಉಪಯೋಗಿಸ ಬೇಕಾಗುತ್ತದೆ. ವಿದ್ಯುತ್ತನ್ನೇ ಅವಲಂಬಿಸಿರುವ ಸ್ಥಾವರಗಳಿಗೆ ತುಂಬಲಾರದ ನಷ್ಟ ಉಂಟಾಗುತ್ತಿದೆ.

ಓವರ್‌ ಲೋಡ್‌ನಿಂದಾಗಿ ಟ್ರಿಪ್‌
ಮಲ್ಪೆ ಮೀನುಗಾರಿಕೆ ಬಂದರು ಸಮೀಪದ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಮುಖ್ಯ ಜಂಕ್ಷನ್‌ನಲ್ಲಿ ಸಮಸ್ಯೆ ಉಂಟಾಗಿದೆ. ಬಹುತೇಕ ಎಲ್ಲ ಸ್ಥಾವರಗಳು ಕಾರ್ಯಾಚರಿಸಿದಾಗ ಪವರ್‌ ಸ್ಟೇಷನ್‌ನಲ್ಲಿ ಓವರ್‌ಲೋಡ್‌ನಿಂದಾಗಿ ಆಗಾಗ ಅಡೆತಡೆ (ಟ್ರಿಪ್‌) ಉಂಟಾಗಿ ಸಮಸ್ಯೆ ತಂದೊಡ್ಡುತ್ತದೆ. ಈ ಬಗ್ಗೆ ಹಿಂದೆ ಮೆಸ್ಕಾಂ ಇಲಾಖೆಗೆ ದೂರು ನೀಡಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲಾಗಿತ್ತು. ಸರಿಪಡಿಸುವ ಭರವಸೆಯೂ ಮೆಸ್ಕಾಂನಿಂದ ದೊರೆತಿತ್ತು ಎನ್ನಲಾಗಿದೆ.

ಈ ಬಾರಿ ಋತು ಆರಂಭದ ದಿನದಲ್ಲೇ ಮೀನಿನ ಅಲಭ್ಯದಿಂದಾಗಿ ಸೆಪ್ಟಂಬರ್‌ವರೆಗೂ ಹೆಚ್ಚಿನ ಘಟಕಗಳಲ್ಲಿ ಮಂಜುಗಡ್ಡೆ ಮಾರಾಟವಾಗುತ್ತಿರಲಿಲ್ಲ. ಹಾಗಾಗಿ ಕೆಲವೊಂದು ಘಟಕಗಳನ್ನು ಬಂದ್‌ ಮಾಡಲಾಗಿತ್ತು. ಇದೀಗ ಮತ್ತೆ ಮೀನುಗಾರಿಕೆ ಆರಂಭಗೊಂಡಿದ್ದು ಎಲ್ಲ ಘಟಕಗಳು ತೆರೆದುಕೊಂಡಿದ್ದರಿಂದ ವಿದ್ಯುತ್‌ ಸಮಸ್ಯೆ ಉದ್ಭವಿಸಿದೆ.

ಐಸ್‌ ಸಿಗದಿದ್ದರೆ ಹಾಳಾಗುವ ಮೀನು
ಈ ಬಾರಿ ಋತು ಆರಂಭದಿಂದಲೂ ಮೀನಿನ ಕೊರತೆಯಿಂದ ಸಮರ್ಪಕ ಮಂಜುಗಡೆª ಮಾರಾಟವಾಗದೆ ಮಂಜುಗಡ್ಡೆ ಉದ್ಯಮಕ್ಕೆ ಸಂಪೂರ್ಣ ನಷ್ಟ ಉಂಟಾಗಿತ್ತು. ಇದೀಗ ಕಳೆದೆರಡು ವಾರದಿಂದ ಅಲ್ಪ ಪ್ರಮಾಣದಲ್ಲಿ ಮೀನಿನ ಲಭ್ಯತೆ ಕಂಡು ಬಂದಿದ್ದೂ ಅದಕ್ಕೆ ಅಗತ್ಯವಾದ ಮಂಜುಗಡ್ಡೆ ಲಭ್ಯವಾಗಿದೆ. ಮೀನಿನ ದರದಲ್ಲೂ ಭಾರೀ ಇಳಿಕೆ ಉಂಟಾಗಿ ಮೀನುಗಾರರು ನಷ್ಟವನ್ನು ಅನುಭವಿಸಿದ್ದಾರೆ. ಹಿಡಿದ ಮೀನಿಗೆ ಮಂಜುಗಡ್ಡೆ ಕ್ಲಪ್ತ ಸಮಯದಲ್ಲಿ ಪೂರೈಸದೆ ಇದ್ದರೆ ಉತ್ತಮ ದರ್ಜೆಯ ಮೀನುಗಳು ಹಾಳಾಗಿ ಮೀನಿನ ಗೊಬ್ಬರ ಕಾರ್ಖಾನೆಗೆ ಕಡಿಮೆ ಬೆಲೆಗೆ ಮಾರಾಟವಾಗುವ ಸಾಧ್ಯತೆ ಇದೆ. ಮಂಜುಗಡ್ಡೆ ಕಾರ್ಖಾನೆಗಳು ಇರುವ ಪ್ರದೇಶದಲ್ಲಿ ನಿರಂತರ ವಿದ್ಯುತ್‌ ಪೂರೈಕೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಮಲ್ಪೆ ಮಂಜುಗಡ್ಡೆ ಸ್ಥಾವರದ ಸಂಘದ ಶಂಕರ್‌ ಸಾಲ್ಯಾನ್‌.

Advertisement

ಮಲ್ಪೆಯಲ್ಲಿ ಸಮರ್ಪಕವಾದ ಸಬ್‌ ಸ್ಟೇಷನ್‌ ಬೇಕು, ಈಗಿರುವ ಸ್ಟೇಷನ್‌ನಲ್ಲಿ ಯಾವುದೇ ಕಾರ್ಯ ಚಟುವಟಿಕೆ ನಡೆಯುತ್ತಿಲ್ಲ. ಮಲ್ಪೆ ಭಾಗದ 67ಮಂಜುಗಡ್ಡೆ ತಯಾರಿಕಾ ಘಟಕಗಳು ತಿಂಗಳಿಗೆ 2.5 ಕೋ.ರೂ. ಕರೆಂಟ್‌ ಬಿಲ್‌ ಪಾವತಿಸುತ್ತದೆ, ಅದಕ್ಕೆ ಪೂರಕವಾದ ಸೇವೆ ನಮಗೆ ಸಿಗುತ್ತಿಲ್ಲ. ಇದು ನಮ್ಮ ದುರದೃಷ್ಟಕರ.
-ವಿಜಯ್‌ ಸುವರ್ಣ, ಅಧ್ಯಕ್ಷರು, ಮಂಜುಗಡ್ಡೆ ಮಾಲಕರ ಸಂಘ, ಮಲ್ಪೆ

ಓವರ್‌ಲೋಡ್‌ನಿಂದಾಗಿ ಕರೆಂಟ್‌ ಟ್ರಿಪ್‌ ಆಗುತ್ತದೆ. ಓವರ್‌ ಲೋಡ್‌ ಕಡಿಮೆ ಮಾಡುವುದಕ್ಕೆ ಹೊಸ ಫೀಡರ್‌ ಹಾಕಲಾಗಿದ್ದು ಅದನ್ನು ಚಾರ್ಜ್‌ ಮಾಡುವುದಕ್ಕೆ ಎರಡು ಎಲ್‌ಸಿ (ಲೈನ್‌ ಕ್ಲಿಯರ್‌) ಅಳವಡಿಸಬೇಕಾಗಿದೆ. ಅದರ ಕೆಲಸ ಮಾಡಲು 2 ದಿವಸ ಬೇಕು. ಆ ವೇಳೆಯಲ್ಲಿ ಮಾತ್ರ ಯಾವುದೇ ಕರೆಂಟ್‌ ಸಪ್ಲೈ ಇರುವುದಿಲ್ಲ. ಈಗಾಗಲೇ ಸಂಘಕ್ಕೆ ಮಂಜುಗಡ್ಡೆ ಉತ್ಪಾದನೆ ಕಡಿಮೆ ಇರುವ ಸಮಯವನ್ನು ತಿಳಿಯಪಡಿಸಲು ಹೇಳಿದ್ದೇವೆ. ಆದಷ್ಟು ಶೀಘ್ರವಾಗಿ ಸಮಸ್ಯೆಯನ್ನು ಪರಿಹರಿಸುವ ಎಲ್ಲ ಪ್ರಯತ್ನ ಮಾಡಲಾಗುವುದು.
-ದಿನೇಶ್‌ ಉಪಾಧ್ಯಾಯ, ಸೂಪರಿಂಡೆಂಟ್‌ ಎಂಜಿನಿಯರ್‌, ಮೆಸ್ಕಾಂ, ಉಡುಪಿ

ಕೆ.ಜಿ.ಗೆ 140ರ ಬಂಗುಡೆ 23ಕ್ಕೆ ಮಾರಾಟ
ಎರಡು ದಿನಗಳ ಹಿಂದೆ ಹೇರಳ ಪ್ರಮಾಣದಲ್ಲಿ ಬಂಗುಡೆ ಮೀನು ಬಂದಿತ್ತು. ಆದರೆ ಮಂಜುಗಡ್ಡೆ ಸಿಗದೆ ಬಹುತೇಕ ಬೋಟು ಮಾಲಕರು ತಂದ ಮೀನನ್ನು ಗೊಬ್ಬರಕ್ಕೆ ಕಳುಹಿಸುವ ಪ್ರಸಂಗ ಎದುರಾಗಿತ್ತು. ಕೆ.ಜಿ.ಗೆ 140ರೂ. ಇರುವ ಬಂಗುಡೆ ಮೀನು ಮಂಜುಗಡ್ಡೆ ಸಿಗದ ಕಾರಣ 23 ರೂ.ಗೆ ಫಿಶ್‌ಮಿಲ್‌ಗೆ ಮಾರಾಟ ಮಾಡುವ ಪರಿಸ್ಥಿತಿ ಬಂದಿತ್ತು. ಬಹುತೇಕ ಮೀನು ವ್ಯಾಪಾರಿಗಳು ಮಂಜುಗಡ್ಡೆಯನ್ನು ಒದಗಿಸಿ ಕೊಡುವ ವ್ಯವಸ್ಥೆ ಮಾಡಿದರೆ ಮಾತ್ರ ಮೀನು ಖರೀದಿಸಲು ಮುಂದಾಗುತ್ತಿದ್ದರು. ಆದರೆ ಬೋಟು ಮಾಲಕರು ಮಂಜುಗಡ್ಡೆ ಅಭಾವದಿಂದ ತಂದ ಮೀನಿಗೆ ದರ ಸಿಗದೇ ನಷ್ಟವನ್ನು ಅನುಭವಿಸಿದ್ದರು.

ಕರಾವಳಿಯಲ್ಲಿ 160 ಮಂಜುಗಡ್ಡೆ ತಯಾರಿಕ ಘಟಕಗಳಿವೆ. ಅದರಲ್ಲಿ ಅತೀ ಹೆಚ್ಚು ಇರುವುದು ಉಡುಪಿ ಜಿಲ್ಲೆಯಲ್ಲಿ. ಉಡುಪಿಯಲ್ಲಿ 79 ಐಸ್‌ಪ್ಲಾಂಟ್‌ಗಳಿದ್ದರೆ, ದಕ್ಷಿಣ ಕನ್ನಡದಲ್ಲಿ 46 ಹಾಗೂ ಉ.ಕನ್ನಡದಲ್ಲಿ 35 ಐಸ್‌ ಪ್ಲಾಂಟ್‌ಗಳಿವೆ.

-ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next