Advertisement
ಒಂದು ಕಾಲದಲ್ಲಿ ಗ್ರಾಮದ ನೂರಾರು ಎಕ್ರೆ ಕೃಷಿ ಭೂಮಿಗೆ ನೀರುಣಿಸುತ್ತಿದ್ದ ಪೊಟ್ಟುಕೆರೆ ಇಂದು ನಿರ್ವಹಣೆ ಇಲ್ಲದೆ ಹೂಳು ತುಂಬಿಕೊಂಡು ಬರಡಾಗಿದೆ. ಇದರ ಒಂದು ಭಾಗ ಪಂಚಾಯತ್‌ಗೆ ಸೇರಿದರೆ ಇನ್ನೊಂದು ಭಾಗ ನಗರಸಭೆಗೆ ಸೇರಿದೆ.
ಗ್ರಾಮದ ಸುತ್ತಮುತ್ತ ಹಲವಾರು ಕೆರೆಗಳಿದ್ದರೂ ಪೊಟ್ಟುಕೆರೆ ಐತಿಹಾಸಿಕ ಹಿನ್ನೆಲೆಯೊಂದಿಗೆ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕೆರೆಯಲ್ಲಿ ತುಂಬಿರುವ ಭಾರಿ ಪ್ರಮಾಣದ ಹೂಳಿನಿಂದಾಗಿ ನೀರಿನ ಒರತೆಯೇ ಇಲ್ಲವಾಗಿದ್ದು ಸುಮಾರು 35 ವರ್ಷಗಳಿಂದ ಇದು ಹೆಸರಿಗೆ ತಕ್ಕಂತೆ ಅಕ್ಷರಶಃ ಪೊಟ್ಟುಕೆರೆಯಾಗಿಯೇ ಉಳಿದಿದೆ. ಕೃಷಿಕರ ಸಂಖ್ಯೆಯೂ ಕಡಿಮೆಯಾಗಿದ್ದರಿಂದ ಈ ಕೆರೆಯನ್ನು ಉಳಿಸಿಕೊಳ್ಳುವ ಗೋಜಿಗೂ ಯಾರೂ ಮುಂದಾಗಿಲ್ಲ ಎನ್ನಲಾಗುತ್ತಿದೆ. ನಗರಸಭಾ ವ್ಯಾಪ್ತಿಯ ಗೋಪಾಲಪುರ ವಾರ್ಡ್ ಮತ್ತು ತೆಂಕನಿಡಿಯೂರು, ಕೆಳಾರ್ಕಳಬೆಟ್ಟು ಗ್ರಾಮವನ್ನು ಸಂಧಿಸುವಲ್ಲಿ ಇರುವ ಈ ಕೆರೆ ಹಿಂದೆ 5 ಎಕ್ರೆಯಷ್ಟು ವಿಸ್ತೀರ್ಣವನ್ನು ಹೊಂದಿತ್ತು. ಇದೀಗ ಒತ್ತುವರಿಯಾಗಿ 3 ಎಕ್ರೆ (ತೆಂಕನಿಡಿಯೂರು ಗ್ರಾಮದ ಭಾಗದಲ್ಲಿ ಒಂದು ಎಕ್ರೆ, ಗೋಪಾಲಪುರ ವಾರ್ಡ್ 2 ಎಕ್ರೆ)ಯಷ್ಟು ಮಾತ್ರ ಉಳಿದಿದೆ. ಪೂರ್ತಿ ಕೈಜಾರಿ ಹೋಗುವ ಮೊದಲು ಸಂಬಂಧಪಟ್ಟ ಆಡಳಿತ ಮತ್ತು ಇಲಾಖೆಗಳು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಹಿಂದೆ ಮೇ ಕೊನೆಯವರೆಗೂ ಈ ಕೆರೆಯಲ್ಲಿ ನೀರು ತುಂಬಿಕೊಂಡಿದ್ದು 200 ಎಕ್ರೆ ಕೃಷಿ ಭೂಮಿಗೆ ಸುತ್ತಮುತ್ತಲಿನ ರೈತರು ಇದೇ ಕೆರೆಯ ನೀರನ್ನು ಉಪಯೋಗಿಸಿ ಹಿಂಗಾರು ಬೆಳೆ ಬೆಳೆಯುತ್ತಿದ್ದರು. ಇಂದು ಕೃಷಿ ಭೂಮಿಗೆ ನೀರಿನ ಕೊರತೆಯಿಂದಾಗಿ ಹಲವಾರು ಎಕ್ರೆ ಕೃಷಿ ಭೂಮಿ ಪಾಳುಬಿದ್ದಿದೆ. ಕೆಲವು ವರ್ಷದ ಹಿಂದೆ ಪಂಚಾಯತ್ ವತಿಯಿಂದ ಬಾವಿಯನ್ನು ನಿರ್ಮಿಸಲಾಗಿದ್ದು ಈ ಬಾವಿಯ ನೀರು ಗ್ರಾಮಕ್ಕೆ ಪೂರೈಕೆಯಾಗುತ್ತಿದೆ.
Related Articles
ಇಲ್ಲಿನ ಗ್ರಾಮದ ಜನರಿಗೆ ಬಿಟ್ಟರೆ ಹೊರಗಿನವರಿಗೆ ಇಲ್ಲೊಂದು ಪೊಟ್ಟುಕರೆ ಇದೆ ಎಂಬುದೇ ಗೊತ್ತಿಲ್ಲ. ಹೂಳು ತುಂಬಿದ್ದರಿಂದ ಮೈದಾನದಂತಾಗಿದೆ. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಆಳವಾಗಿ ಹೂಳು ತೆಗೆದು ಅಭಿವೃದ್ಧಿಪಡಿಸಿದರೆ ಪುತ್ತೂರು ಮತ್ತು ಕೆಳಾರ್ಕಳಬೆಟ್ಟು ಗ್ರಾಮದ ನೂರಾರು ಬಾವಿಯ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ. ಕೆರೆಯ ಸುತ್ತ ದಂಡೆಯನ್ನು ನಿರ್ಮಿಸಿ ವಾಕಿಂಗ್ ಟ್ರಾಫಿಕ್ ಮತ್ತು ಕುಳಿತುಕೊಳ್ಳಲು ಬೆಂಚುಗಳನ್ನು ಅಳವಡಿಸಿ ಅಭಿವೃದ್ಧಿ ಪಡಿಸಿದರೆ ಸಂಜೆ ಕಳೆಯಲು ಈ ಭಾಗದ ಜನರಿಗೆ ಉತ್ತಮ ಜಾಗ. ಈ ಕೆರೆಯಲ್ಲಿ ನೀರು ನಿಲ್ಲಿಸುವ ಕೆಲಸ ಮಾಡಿದರೆ ಸಮೀಪದ ನೂರಾರು ಬಾವಿಗಳಲ್ಲಿ ಸದಾ ನೀರು ತುಂಬಿರುತ್ತದೆ. ಇದನ್ನು ಕೆರೆಯಾಗಿಯೇ ಶಾಶ್ವತ ವಾಗಿ ಉಳಿಯಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆ.
Advertisement
ಬಾವಿಯಲ್ಲಿ ನೀರಿಲ್ಲಇಲ್ಲಿರುವ ಪೊಟ್ಟುಕೆರೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಯಾರೂ ಮುಂದಾಗಿಲ್ಲ. ರಾತ್ರಿ ವೇಳೆಯಲ್ಲಿ ಹೊರಗಿನಿಂದ ಬಂದು ಕಟ್ಟಡದ ತ್ಯಾಜ್ಯವನ್ನು ಇಲ್ಲಿ ಸುರಿಯುತ್ತಾರೆ. ಕೆರೆ ಅಭಿವೃದ್ಧಿ, ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ಹಿನ್ನೆಲೆಯಲ್ಲಿ ಪುರಾತನ ಕೆರೆಯನ್ನು ಉಳಿಸಬೇಕು ಎನ್ನುತ್ತಾರೆ ಸ್ಥಳೀಯರಾದ ರಿಚಾರ್ಡ್ ಕ್ರಾಸ್ತೋ ಅವರು.