ಮಲ್ಪೆ: ಸಿಟಿಜನ್ ಸರ್ಕಲ್ ನಿಂದ ಕೊಡವೂರು ರಸ್ತೆಯ ಜೇಮ್ಸ್ ಕಂಪೌಂಡ್ ಬಳಿ ರಸ್ತೆ ಬದಿಯಲ್ಲಿ ಕಳೆದ 7-8 ವರ್ಷಗಳಿಂದ ನಿತ್ಯ ಕಸ ಸುರಿಯಲಾಗುತ್ತದೆ. ಪ್ಲಾಸಿಕ್ ಚೀಲದೊಳಗಿರುವ ಆಹಾರವನ್ನು ತಿನ್ನಲು ದನಗಳು ಇಲ್ಲಿ ಸಾಲುಗಟ್ಟಿ ನಿಲ್ಲುತ್ತವೆ. ಪ್ಲಾಸಿಕ್ ಕವರನ್ನು ಬಿಡಿಸಲಾಗದ ಇವು ಆಹಾರವನ್ನು ಇಡೀ ಪ್ಲಾಸ್ಟಿಕ್‌ನೊಂದಿಗೆ ನುಂಗುತ್ತವೆ. ಇದರಿಂದ ಪ್ಲಾಸ್ಟಿಕ್ ಕರಗದೆ ಹೊಟ್ಟೆಯಲ್ಲಿ ಹಾಗೆ ಉಳಿದು ಎಷ್ಟೊ ದನಗಳು ಹೊಟ್ಟೆನೋವು ಇನ್ನಿತರ ಕಾಯಿಲೆಗೆ ಗುರಿಯಾಗಿ ಅಸು ನೀಗುತ್ತವೆ. ಮಾತ್ರವಲ್ಲದೆ ದನಗಳ ಓಡಾಟದಿಂದ ರಾತ್ರಿ ವೇಳೆ ಇಲ್ಲಿನ ವಾಹನ ಸಂಚಾರಕ್ಕೂ ತೊಂದರೆಯಾಗಿದೆ.
ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಪ್ರಾಣಿಗಳಿಗೆ ಮಾರಕವಾಗಿದೆ. ಹಸು, ಬೆಕ್ಕು, ನಾಯಿ ಇತ್ಯಾದಿಗಳು ಪ್ಲಾಸ್ಟಿಕ್ ಚೀಲಗಳನ್ನು ತಿನ್ನುವುದರಿಂದ ಅವುಗಳ ಹೊಟ್ಟೆಗೆ ಸೇರಿ ಪ್ರಾಣಕ್ಕೆ ಕುತ್ತು ಬರುವ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಲೈಟ್ ಇಲ್ಲದೆ ಅಪಘಾತಕ್ಕೂ ಕಾರಣ
ರಾತ್ರಿ ವೇಳೆ ಇಲ್ಲಿ ಆಹಾರ ತಿನ್ನಲು ಬರುವ ದನಗಳು ರಸ್ತೆಯಲ್ಲಿ ಓಡಾಡುತ್ತಿದ್ದು ಇಲ್ಲಿ ದಾರಿದೀಪ ಇಲ್ಲದ ಕಾರಣ ನಿತ್ಯ ಇಲ್ಲಿ ಅಪಘಾತಗಳಾಗುತ್ತದೆ. ದ್ವಿಚಕ್ರ ಸವಾರರು ಕತ್ತಲೆಯಲ್ಲಿ ಎದುರು ಬರುವ ದನಗಳು ಕಾಣದೆ ಅದಕ್ಕೆ ಢಿಕ್ಕಿ ಹೊಡೆದು ಅನಾಹುತಕ್ಕೆ ಒಳಗಾಗುತ್ತಿದ್ದಾರೆ. ಕನಿಷ್ಟ ಇಲ್ಲಿನ ದಾರಿದೀಪದ ವ್ಯವಸ್ಥೆ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಸೂಕ್ತ ಕ್ರಮ ಕೈಗೊಳ್ಳಿ: ಕೆಲವು ಮಂದಿ ರಾಜಾರೋಷವಾಗಿ ರಸ್ತೆ ಬದಿ ಕಸ ಎಸೆದು ನಗರದ ಸೌಂದರ್ಯ ಕೆಡಿಸುತ್ತಿದ್ದಾರಲ್ಲದೆ ಹಸುಗಳ ಜೀವಬಲಿಗೂ ಕಾರಣರಾಗು ತ್ತಿದ್ದಾರೆ. ಇಂತವರ ವಿರುದ್ಧ ಕಠಿನ ಕ್ರಮ ಕೈಗೊಳ್ಳದ ಹೊರತು ಇದಕ್ಕೆ ಕಡಿವಾಣ ಹಾಕುವುದು ಅಸಾಧ್ಯ. ಇಲ್ಲಿ ದಾರಿದೀಪ ಇಲ್ಲದೆ ಅಪಘಾತ ಉಂಟಾಗುತ್ತಿದ್ದು ಸಂಬಂಧಪಟ್ಟ ವರು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. –
ಪ್ರಶಾಂತ್ ಸನಿಲ್, ಜೇಮ್ಸ್ ಕಂಪೌಂಡ್