Advertisement

ಕುಸಿದು ಬೀಳುವ ಭೀತಿಯಲ್ಲಿದೆ ಮಲ್ಪೆ ಮೀನು ಮಾರುಕಟ್ಟೆ; ಹೈಟೆಕ್‌ ಮೀನು ಮಾರುಕಟ್ಟೆಗಾಗಿ ಆಗ್ರಹ

11:54 AM Jan 10, 2023 | Team Udayavani |

ಮಲ್ಪೆ: ನಗರಸಭೆ ಕೊಳ ವಾರ್ಡ್‌ ವ್ಯಾಪ್ತಿಯಲ್ಲಿ ಮಲ್ಪೆ ಹಳೆಯ ಮೀನು ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿ ಕನಿಷ್ಠ ಮೂಲ ಸೌಕರ್ಯವೂ ಇಲ್ಲದಾಗಿದೆ. ಇಲ್ಲಿನ ಮೀನು ಮಾರುಕಟ್ಟೆಯ ಕಟ್ಟಡ ತುಂಬಾ ಹಳೆಯದಾಗಿದ್ದು ಶಿಥಿಲಾವಸ್ಥೆಯಲ್ಲಿದೆ ಕಟ್ಟಡದ ಅವಶೇಷಗಳು ಒಂದೊಂದಾಗಿ ನೆಲಕ್ಕೆ ಉರುಳಲು ಆರಂಭಿಸಿವೆ. ಕಟ್ಟಡದ ಹೆಂಚು, ರೀಪು, ಮಳೆ, ಗಾಳಿಗೆ ಒಡೆದು ಹೋಗಿದೆ. ಇಲ್ಲಿ ಯಾವುದೇ ಶುಚಿತ್ವ ಇಲ್ಲದಾಗಿದೆ.

Advertisement

ತಾಜ್ಯಗಳನ್ನು ಇದರ ಪಕ್ಕವೇ ಎಸೆಯುವುದರಿಂದ ಅದನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ದುರ್ವಾಸನೆ ಬರುತ್ತಿದ್ದು ಗ್ರಾಹಕರಿಗೆ ತುಂಬಾ ತೊಂದರೆಯಾಗಿದೆ. ಮಾಂಸದ ಮಾರುಕಟ್ಟೆಯ ಕಟ್ಟಡ ಸಂಪೂರ್ಣ ಬಿರುಕು ಬಿಟ್ಟಿದ್ದು, ಮಳೆ ಬರುವಾಗ ಮಳೆ ನೀರು ಒಳ ಹೊಕ್ಕು ಸಮಸ್ಯೆ ಸೃಷ್ಟಿಸಿ ಅಭದ್ರತೆ ಕಾಡುತ್ತಿದೆ.

ಒಬ್ಬರೇ ಮೀನು ಮಾರುವ ಮಹಿಳೆ
ಒಂದು ಕಾಲದಲ್ಲಿ 20ರಿಂದ 25 ಮಂದಿ ಕುಳಿತು ಮೀನು ಮಾರಾಟ ಮಾಡುವ ಕೇಂದ್ರ ಇದಾಗಿತ್ತು. ಇಲ್ಲಿಗೆ ಬರುವ ಗ್ರಾಹಕರ ಸಂಖ್ಯೆಯೂ ಹೆಚ್ಚಿತ್ತು. ಪ್ರಸ್ತುತ ಇಲ್ಲಿ ಒಬ್ಬರು ಮಹಿಳೆ ಮಾತ್ರ ಮೀನು ಮಾರಾಟಕ್ಕೆ ಕುಳಿತಿರುತ್ತಾರೆ.

ಬಹುತೇಕ ಮಹಿಳೆಯರು ಮಲ್ಪೆ ಬಂದರಿನಲ್ಲೇ ಕುಳಿತು ವ್ಯಾಪಾರ ಮಾಡುತ್ತಾರೆ. ಇದರಿಂದ ಖರೀದಿ ಮಾಡುವ ಗ್ರಾಹಕರೂ ಕೂಡ ಬಂದರು ಕಡೆಗೆ ಹೋಗುತ್ತಾರೆ ಎನ್ನಲಾಗಿದೆ. ಕಟ್ಟಡ ಬಿದ್ದು ಅಪಾಯ ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಪೂರ್ಣ ಪ್ರಮಾಣದ ಕಾಯಕಲ್ಪ ಒದಗಿಸುವ ಅಗತ್ಯವಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಪಾರ್ಕಿಂಗ್‌ಗೆ ಜಾಗ ಇಲ್ಲ
ಮಾರುಕಟ್ಟೆಯ ಒಳಗೆ ಕುಳಿತು ಕೊಳ್ಳಲು ಹೆದರಿಕೆಯಾಗುತ್ತದೆ. ಯಾವಾಗ ಕುಸಿದು ಬೀಳುತ್ತದೊ ಎಂಬ ಭಯ. ಮಾಡಿನಿಂದ ಹುಳ ಹುಪ್ಪಟಗಳು ಮೈಮೇಲೆ ಬೀಳುತ್ತವೆ. ವಾಹನಗಳನ್ನು ತಂದರೆ ಪಾರ್ಕಿಂಗ್‌ ಮಾಡಲು ಜಾಗವಿಲ್ಲ ದ್ದರಿಂದ ಜನರೂ ಕೂಡ ಬೇರೆ ಕಡೆಗೆ ಹೋಗುತ್ತಾರೆ ಎನ್ನುತ್ತಾರೆ ಇಲ್ಲಿ ನಿತ್ಯ ಮೀನು ಮಾರುವ ಮಹಿಳೆ ಗುಲಾಬಿ ಅವರು.

Advertisement

ಸುಸಜ್ಜಿತ ಮಾರುಕಟ್ಟೆಗೆ ಪ್ರಯತ್ನ
ಮಲ್ಪೆಯ ಏಕೈಕ ಹಳೆ ಮೀನು ಮಾರುಕಟ್ಟೆ. ಇಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಬೇಕೆಂದು ಈಗಾಗಲೇ ಕರಾವಳಿ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಈ ಬಗ್ಗೆ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ.
-ಲಕ್ಷ್ಮೀ ಮಂಜುನಾಥ್‌, ಉಪಾಧ್ಯಕ್ಷರು ಉಡುಪಿ
ನಗರಸಭೆಸದಸ್ಯರು ಕೊಳ ವಾರ್ಡ್

ದೊಡ್ಡ ಮೊತ್ತ ಅಗತ್ಯ
ನೂತನ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಅಂದಾಜು ವೆಚ್ಚವನ್ನು ತಯಾರಿಸಿ ಪ್ರಾಧಿಕಾರಕ್ಕೆ ಕಳುಹಿಸಲಾಗಿತ್ತು. ಪ್ರಸ್ತುತ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆಯ ಕಾರಣ ಯೋಜನೆ ಹಿಂದೆ ಬಿದ್ದಿತ್ತು. ಇದರ ನಿರ್ಮಾಣಕ್ಕೂ ದೊಡ್ಡ ಮೊತ್ತ ಬೇಕಾಗುತ್ತದೆ. ಒಟ್ಟಿನಲ್ಲಿ ಮುಂದೆ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ನಿರ್ಮಾಣ ಮಾಡಲಾಗುವುದು.
-ಸುಮಿತ್ರಾ ಆರ್‌. ನಾಯಕ್‌,
ಅಧ್ಯಕ್ಷರು, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next