ಮಲ್ಪೆ: ಮನೆ ದುರಸ್ತಿಗೆಂದು ಕೂಡಿಟ್ಟ ಹಣದಿಂದ 140 ಮನೆಗೆ ಅಕ್ಕಿ ವಿತರಿಸಿ ಸುದ್ದಿಯಾಗಿದ್ದ ಶಾರದಕ್ಕನ ಗುಡಿಸಲಿಗೆ ಗುರುವಾರ ಜಿಲ್ಲಾಧಿಕಾರಿ ಜಗದೀಶ್ ಭೇಟಿ ನೀಡಿದರು.
ಮೀನಿನ ಕೆಲಸ ಮಾಡಿ ಹರಕು ಗುಡಿಸಲಿನಲ್ಲಿ ಜೀವನ ಸಾಗಿಸುವ ಶಾರದಕ್ಕನ ಸೇವಾ ಮನೋಭಾವಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದ್ಭುತವಾದ ಕೆಲಸವನ್ನು ಮಾಡಿದ ಶಾರದಕ್ಕನಿಗೆ ಸರಕಾರದ ವತಿಯಿಂದ ಮನೆ ನಿರ್ಮಿಸಿಕೊಡಬೇಕೆಂಬ ನಿಟ್ಟಿನಲ್ಲಿ ಆವರ ಮನೆಗೆ ಬಂದಿದ್ದೇವೆ. ಈ ಬಗ್ಗೆ ನಗರಸಭೆ ಪೌರಾಯುಕ್ತ ಆನಂದ ಕಲ್ಲೊಳಿಕರ್ ಅವರಿಗೆ ಸೂಚನೆಯನ್ನು ನೀಡಲಾಗಿದೆ ಎಂದರು.
ಕುಂದಾಪುರ ಸಹಾಯಕ ಆಯುಕ್ತ ರಾಜು, ಉಡುಪಿ ತಹಶೀಲ್ದಾರ್‌ಪ್ರದೀಪ್ ಕುಡೇìಕರ್ ಜತೆಯಲ್ಲಿದ್ದರು.ಮೀನುಗಾರಿಕೆ ಬಂದರಿಗೆ ತಾಗಿಕೊಂಡು ಬಾಪುತೋಟದ ಸಮೀಪದಲ್ಲಿ ಆರು ಮಂದಿ ಮಕ್ಕಳೊಂದಿಗೆ ಗುಡಿಸಲಲ್ಲಿ ಜೀವನ ಸಾಗಿಸುವ ದಲಿತ ಮೀನುಗಾರ ಮಹಿಳೆಗೆ ಸರಿಯಾದ ಮನೆಯೇ ಇಲ್ಲ. ಅದರೂ ತನ್ನ ಮನೆ ದುರಸ್ತಿಗೆಂದು ಕೂಡಿಟ್ಟ 30ಸಾವಿರ ರೂಪಾಯಿಯಲ್ಲಿ 700 ಕೆ.ಜಿ. ಅಕ್ಕಿ ಖರೀದಿಸಿ 140 ಮನೆಗೆ ಹಂಚಿದ್ದಾರೆ. ಜತೆಗೆ ಒಂದಷ್ಟು ತರಕಾರಿಯನ್ನು ತಂದು ಎಲ್ಲ ಮನೆಗೆ ವಿತರಿಸಿದ್ದರು. ತಾನು ಅಕ್ಕಿ ಹಂಚಿದ ವಿಷಯವನ್ನು ಯಾರಲ್ಲೂ ತಿಳಿಸಿಲ್ಲ. ಅವರಿಂದ ನೆರವು ಪಡೆದವರೆ ಹೇಳಿದ್ದರಿಂದ ವಿಷಯ ಬೆಳಕಿಗೆ ಬಂದು ಸಾಮಾಜಿಕ ಜಾಲ ತಾಣದಲ್ಲೂ ವೈರಲ್ ಆಗಿತ್ತು.
ಇದು ನನ್ನ ಭಾಗ್ಯ
ತನ್ನಂತೆ ಇತರರೂ ಕಷ್ಟದಲ್ಲಿ ಇರುವುದನ್ನು ಕಂಡು ನಾನು ಕೂಡಿಟ್ಟ ಹಣದಿಂದ ಅಕ್ಕಿಯನ್ನು ಹಂಚಿದ್ದೇನೆ. ಆದರೆ ನನ್ನ ಈ ಕಾರ್ಯಕ್ಕೆ ಈ ರೀತಿ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತದೆ ಎಂದು ನಾನು ಕನಸಲ್ಲೂ ಎಂದೂ ಎಣಿಸಿರಲಿಲ್ಲ. ನನ್ನ ಹರಕು ಮನೆಗೆ ಜಿಲ್ಲಾಧಿಕಾರಿ ಬರುವ ಹಾಗೆೆ ಆಯಿತ್ತಲ್ಲ. ಇದು ನನ್ನ ಭಾಗ್ಯ
.
-ಶಾರದಾ, ಮೀನು ಮಾರುವ ಮಹಿಳೆ